ಶಿವಮೊಗ್ಗ | ನೀಟ್ ಪರೀಕ್ಷೆ ವ್ಯವಸ್ಥೆಯನ್ನು ರದ್ದುಪಡಿಸಿ ಸಿಇಟಿ ವ್ಯವಸ್ಥೆಯನ್ನು ಜಾರಿಗೆ ತನ್ನಿ : ಪಿ .ಎಂ ಮಾಲತೇಶ್ ಆಗ್ರಹ

ಶಿವಮೊಗ್ಗ

ಶಿವಮೊಗ್ಗ,ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಶ್ರೀ ವೀರಪ್ಪ ಮೊಯ್ಲಿ ರವರು ದೇಶದಲ್ಲಿಯೇ ಮೊದಲ ಬಾರಿಗೆ ತಾಂತ್ರಿಕ ಮತ್ತು ವೈದ್ಯಕೀಯ ಕೋರ್ಸ್ ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜಾರಿಗೊಳಿಸಿ, ಬಡವರು ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಸಹ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದ ಪ್ರವೇಶಕ್ಕೆ ಅನುಕೂಲವನ್ನು ಮಾಡಿಕೊಟ್ಟರು. ರಾಜ್ಯದಲ್ಲಿ ತಂದ ಸಿಇಟಿ ವ್ಯವಸ್ಥೆ ದೇಶಕ್ಕೆ ಮಾದರಿಯಾಗಿತ್ತು.

ಹಲವಾರು ವರ್ಷಗಳ ಕಾಲ ನಮ್ಮ ರಾಜ್ಯದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕವೇ ತಾಂತ್ರಿಕ ಮತ್ತು ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶವನ್ನು ನೀಡುವಂತಹ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆದುಕೊಂಡು ಬಂದಿದ್ದು, ಎಂದು ಸಹ ಪರೀಕ್ಷೆಯ ವ್ಯವಸ್ಥೆಯಲ್ಲಿ ಲೋಪಗಳು ಆಗಿರಲಿಲ್ಲ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಿಇಟಿ ವ್ಯವಸ್ಥೆಯನ್ನು ದುರ್ಬಲಗೊಳಿಸಿ ವೈದ್ಯಕೀಯ ಪದವಿಯ ಕೋರ್ಸ್ ಗಳಿಗೆ ಪ್ರವೇಶವನ್ನು ನೀಡುವ ಕಾರಣಕ್ಕಾಗಿ ದೇಶದಲ್ಲಿ ಏಕರೂಪದ ನೀಟ್ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತಂದಿರುತ್ತಾರೆ. ವಿಶೇಷವಾಗಿ ಭಾರತ ದೇಶದಲ್ಲಿ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳು ಮತ್ತು ಸೀಟುಗಳನ್ನು ಹೊಂದಿರುವ ಪ್ರಮುಖ ರಾಜ್ಯದಲ್ಲಿ ಕರ್ನಾಟಕ ಒಂದಾಗಿದೆ.

ನೀಟ್ ಪರೀಕ್ಷಾ ಪದ್ಧತಿಯ ಕಾರಣದಿಂದಾಗಿ ಈ ಹಿಂದೆ ಸಿಇಟಿ ವ್ಯವಸ್ಥೆಯಲ್ಲಿ ಹೆಚ್ಚು ಸ್ಥಾನಗಳನ್ನು ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಪಡೆದುಕೊಳ್ಳಲು ಸಾಧ್ಯವಾಗಿದ್ದ ಅವಕಾಶಗಳು ಹೋಗಿ ,ನಮ್ಮ ರಾಜ್ಯದ ಮಕ್ಕಳ ಪಾಲು ಕಡಿಮೆಯಾಗಿರುತ್ತದೆ. ಕಳೆದ ಆರು ವರ್ಷದಲ್ಲಿ ಹಲವಾರು ಬಾರಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ . ಎಲ್ಲ ಸಂದರ್ಭದಲ್ಲೂ ಹಾಲಿ ಕೇಂದ್ರದ ಶಿಕ್ಷಣ ಸಚಿವರಾಗಿರುವ ಧರ್ಮೇಂದ್ರ ಪ್ರಧಾನ ನೇತೃತ್ವದಲ್ಲಿಯೇ ಪರೀಕ್ಷೆಗಳ ವ್ಯವಸ್ಥೆಯಲ್ಲಿ ವಿಫಲತೆಯಾಗಿದೆ.

ನೀಟ್ ಪರೀಕ್ಷಾ ಪದ್ಧತಿಯಲ್ಲಿನ ಲೋಪಗಳು ಪ್ರಶ್ನೆ ಪತ್ರಿಕೆ ಸೋರಿಕೆ ಈ ಹಿನ್ನೆಲೆಯಲ್ಲಿ ಈ ವರ್ಷ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆಯನ್ನು ಮಾಡಿಕೊಂಡಿರುವುದು ಅತ್ಯಂತ ಗಂಭೀರವಾದ ಸಂಗತಿಯಾಗಿದೆ. ವಿದ್ಯಾರ್ಥಿ ಯುವಜನರಲ್ಲಿ ಪರೀಕ್ಷೆಯ ವ್ಯವಸ್ಥೆ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಭುಗಿಲೆದ್ದು ಹೋರಾಟಕ್ಕಿಳಿದಿದ್ದಾರೆ. ಹೋರಾಟಗಾರರನ್ನು ದೇಶದ್ರೋಹಿಗಳು ,ಮತ್ತೊಂದು ದೇಶದ ಏಜೆಂಟ್ಗಳು, ದೇಶ ವಿಭಜಕರು, ಎಂದು ಕರೆದುಕೊಂಡು ಮೂಲಭೂತವಾದ ಸಮಸ್ಯೆಯನ್ನು ಬಗೆಹರಿಸದೆ ರಾಜಕಾರಣ ಮಾಡುವುದನ್ನ ಬಿಟ್ಟು, ಕೇಂದ್ರ ಸರ್ಕಾರ ಹೋರಾಟಗಾರರ ಪ್ರಮುಖವಾದ ಬೇಡಿಕೆಗಳನ್ನ ಈಡೇರಿಸಲಿ.

ದೇಶದಲ್ಲಿ ಈ ಹಿಂದೆ ಹಿರಿಯ ಸಚಿವರೆ ಹಲವಾರು ಸಂದರ್ಭಗಳಲ್ಲಿ ರಾಜೀನಾಮೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಒಬ್ಬ ಕೇಂದ್ರದ ಶಿಕ್ಷಣ ಸಚಿವರ ರಾಜೀನಾಮೆಯನ್ನು ಪಡೆದುಕೊಳ್ಳುವುದಕ್ಕೆ ಇಷ್ಟೊಂದು ಲೆಕ್ಕಾಚಾರ ಹಾಕುತ್ತಿರುವುದು ಅರ್ಥವಾಗುತ್ತಿಲ್ಲ. ಜನರ ಧ್ವನಿಯನ್ನು ಸುಳ್ಳು ಸುದ್ದಿ ಹಬ್ಬಿಸುವ ಮಾಧ್ಯಮಗಳ ಮೂಲಕ ಅಥವಾ ಬಾಡಿಗೆ ಜನರ ಮೂಲಕ ಹೆಚ್ಚು ದಿನ ತಡೆಯಲು ಸಾಧ್ಯವಿಲ್ಲ. ಕೂಡಲೇ ಕೇಂದ್ರ ಸರ್ಕಾರ ಶಿಕ್ಷಣ ಸಚಿವರ ರಾಜೀನಾಮೆಯನ್ನು ಪಡೆಯುವುದರ ಜೊತೆಗೆ, ಈ ಹಿಂದೆ ಇದ್ದ ರೀತಿಯಲ್ಲಿ ವೈದ್ಯಕೀಯ ಮತ್ತು ತಾಂತ್ರಿಕ ಪದವಿಗಳ ಪ್ರವೇಶ ಪರೀಕ್ಷೆಯನ್ನು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ನೀಡಿ ನೀಟ್ ಪರೀಕ್ಷಾ ಪದ್ಧತಿಯನ್ನು ರದ್ದು ಮಾಡಲಿ.

ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಹೋರಾಟ ಮಾಡುವ ಸಂದರ್ಭದಲ್ಲಿ ನೀಟ್ ಪರೀಕ್ಷಾ ಪದ್ಧತಿಯಲ್ಲಿನ ಲೋಪಗಳು ಸರಿಪಡಿಸುವುದು ಹೇಗೆ, ಜೊತೆಗೆ ಸಿಇಟಿ ವ್ಯವಸ್ಥೆಯನ್ನು ಯಾವ ಕಾರಣಕ್ಕೆ ಆಯಾ ರಾಜ್ಯಗಳಿಗೆ ಬಿಟ್ಟು ಕೊಡಬೇಕು ಎನ್ನುವುದನ್ನ ಪ್ರತಿಪಾದಿಸಲು ಮತ್ತು ಮಾಹಿತಿ ಪೂರ್ಣವಾಗಿ ಸದನದಲ್ಲಿ ಚರ್ಚಿಸಲು ವೀರಪ್ಪ ಮೊಯ್ಲಿ ರವರ ಮಾರ್ಗದರ್ಶನ ಈ ವಿಚಾರದಲ್ಲಿ ಪಡೆಯುವುದು ಸೂಕ್ತವಾಗಿದೆ.

ಕಾರಣ ಸಿಇಟಿ ವ್ಯವಸ್ಥೆ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ಬಂದಷ್ಟು ದಕ್ಷವಾಗಿ ಬೇರೆ ಯಾವ ರಾಜ್ಯದಲ್ಲೂ ಇರಲಿಲ್ಲ ಹಾಗೂ ಸಿಇಟಿ ವ್ಯವಸ್ಥೆಯನ್ನು ಜಾರಿಗೆ ತಂದಂತಹ ಮೊದಲಿಗರು ಇವರೇ ಆಗಿರುವುದರಿಂದ, ಈ ವಿಚಾರದಲ್ಲಿ ಇವರು ಹೆಚ್ಚು ಅನುಭವ ಹೊಂದಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆಯ ಸೋರಿಕೆಯ ವಿಚಾರವೇ ಹೋರಾಟಕ್ಕೆ ಪ್ರಮುಖವಾದಂತಹ ವಿಚಾರವಾಗಿರಬೇಕು. ಹೋರಾಟದ ದಿಕ್ಕು ತಪ್ಪಿಸುವಂತಹ ಪ್ರಯತ್ನಗಳು ನಡೆಯಬಾರದು ಮತ್ತು ಹೋರಾಟದ ಮೂಲ ಆಶಯಕ್ಕೆ ದಕ್ಕೆಯಾಗದಂತಹ ಅದರ ತೀವ್ರತೆಯನ್ನ ಕಾಪಾಡುವ ರೀತಿಯಲ್ಲಿ ಹೋರಾಟದ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಕರ್ನಾಟಕ ಸರ್ಕಾರ ನಿರ್ದೇಶಕರಾದ ಪಿ .ಎಂ ಮಾಲತೇಶ್ ಆಗ್ರಹಿಸಿದ್ದಾರೆ .

Author