ಆಗುಂಬೆ, ಹೊನ್ನಾವರ ಮೂಲದ ಕುಟುಂಬವೊಂದು ಕಾರಲಿನಲ್ಲಿ ಆಗುಂಬೆ ಮೂಲಕ ಶೃಂಗೇರಿಗೆ ತೆರಳುತ್ತಿದ್ದ ವೇಳೆ ನಬಾಳದಲ್ಲಿ ರಸ್ತೆಯಲ್ಲಿ ನಿಂತ ನೀರಿನಿಂದಾಗಿ ಸಿಲುಕಿಕೊಂಡಿದ್ದು ಅವರನ್ನು ಸ್ಥಳೀಯರು ರಕ್ಷಿಸಿರುವ ಘಟನೆ ವರದಿಯಾಗಿದೆ. ಆಗುಂಬೆಯಲ್ಲಿ ರಾತ್ರಿಯಿಡಿ ಸುರಿದ ಮಳೆಯಿಂದಾಗಿ ರಸ್ತೆಗಳ ಮೇಲೆ ಮೊಣಕಾಲಿನಷ್ಟು ನೀರು ನಿಂತಿದೆ.
ಈ ನೀರಿನ ಅಂದಾಜು ಸಿಗದ ಕಾರಣ ಸ್ವಿಫ್ಟ್ ಕಾರು ರಸ್ತೆಯಲ್ಲಿ ಸಾಗಿದೆ. ಪರಿಣಾಮ ಕಾರು ನೀರಿನ ಮಣ್ಣಿನಲ್ಲಿ ಸಿಲುಕಿಕೊಂಡು ಚಲಿಸದಂತಾಗಿದೆ. ಇದನ್ನಕಂಡ ಗ್ರಾಮದ ಕೆಲ ಯುವಕರು ಹಗ್ಗ ಕಟ್ಟಿ ಎಳೆದುಕೊಂಡು ಬಂದಿದ್ದಾರೆ. ನೀರಿನ ಹರಿವು ತೀವ್ರವಾಗಿದ್ದರಿಂದ ಕಾರಿನಲ್ಲಿದ್ದ ಕುಟುಂಬದ ಸದಸ್ಯರು ಆತಂಕಕ್ಕೊಳಗಾಗಿದ್ದರು.
ಸ್ಥಳೀಯರಾದ ಪ್ರವೀಣ್ ಬೆಳ್ಳೂರು, ಉಮೇಶ್ ಹೊಸ್ಕೇರಿ ಹಾಗೂ ಮಂಜುನಾಥ ರೈಸ್ ಮಿಲ್ ಅವರ ತ್ವರಿತ ಕಾರ್ಯಾಚರಣೆಯಿಂದ ಕುಟುಂಬದ ಎಲ್ಲ ಸದಸ್ಯರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು.
ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಅವರು ಕಾರ್ಯಾಚರಣೆ ನಡೆಸಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.
