ತೀರ್ಥಹಳ್ಳಿ ತಾಲೂಕಿಗೆ ಸೇವೆ ಸಲ್ಲಿಸಿದ್ದ ಹಿರಿಯ ಕೃಷಿಕ, ಸಮಾಜಸೇವಕ ಹಾಗೂ ಮಾಜಿ ತಾಲೂಕು ಬೋರ್ಡ್ ಸದಸ್ಯ ಗುಂಡಪ್ಪ ಹೆಗ್ಡೆ (94) ಅವರು ವಯೋಸಹಜ ಅನಾರೋಗ್ಯದಿಂದ ಇಂದು ನಿಧನರಾದರು.
1967ರಲ್ಲಿ ತಾಲೂಕು ಬೋರ್ಡ್ ಸದಸ್ಯರಾಗಿ ಜನಸೇವೆ ಸಲ್ಲಿಸಿದ್ದ ಅವರು, ಹಿರಿಯ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡ ಅವರ ಶಿಷ್ಯರಾಗಿದ್ದರು. ಅಲ್ಲದೆ, ತಮ್ಮ ಭಾಗದಲ್ಲಿ ಪಟೇಲರಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರ ವಿಶ್ವಾಸ ಗಳಿಸಿದ್ದರು.ಆಗುಂಬೆಯ ಶ್ರೀ ವೇಣುಗೋಪಾಲ ಕೃಷ್ಣ ದೇವಸ್ಥಾನದ ಮುಖ್ಯಸ್ಥರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಗುಂಡಪ್ಪ ಹೆಗ್ಡೆ ಅವರು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿಯೂ ವಿಶಿಷ್ಟ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿದ್ದರು.
ಕೃಷಿಕರಾಗಿದ್ದ ಅವರು ತಮ್ಮ ಬದುಕಿನುದ್ದಕ್ಕೂ ಹಲವಾರು ಬಡ ಕುಟುಂಬಗಳ ನೆರವಿಗೆ ಧಾವಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ಸರಳತೆ, ಸೇವಾ ಮನೋಭಾವ ಮತ್ತು ಜನಪರ ಚಿಂತನೆಗೆ ಸ್ಥಳೀಯರಲ್ಲಿ ಅಪಾರ ಗೌರವವಿತ್ತು.ಅವರು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಸಚೀಂದ್ರ ಹೆಗ್ಡೆ ಅವರ ತಂದೆಯಾಗಿದ್ದು, ಮೂವರು ಮಕ್ಕಳನ್ನು ಅಗಲಿದ್ದಾರೆ.
ಕುಟುಂಬದ ಮೂಲಗಳ ಪ್ರಕಾರ, ನಾಳೆ ಬೆಳಿಗ್ಗೆ 11 ಗಂಟೆಗೆ ನಾಬಳದ ಸ್ವಗೃಹದ ಆವರಣದಲ್ಲಿ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಲು ಏರ್ಪಾಡು ಮಾಡಲಾಗಿದೆಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಶೇಷ ಕರ್ತವ್ಯ ಅಧಿಕಾರಿ ಶ್ರೀಧರ್ ಅವರ ಅಕ್ಕನ ಪತಿಯಾಗಿದ್ದರು ಗುಂಡಪ್ಪ ಹೆಗ್ಡೆ.
