ಶಿವಮೊಗ್ಗ ಜಿಲ್ಲೆಯಾದ್ಯಂತ ವಿವಿಧ ದೇವಸ್ಥಾನಗಳಲ್ಲಿ ರೈತರು ಮತ್ತು ಸಾರ್ವಜನಿಕರು ಮಳೆಗಾಗಿ ಪರ್ಜನ್ಯ ಜಪ ನಡೆಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದರು. ಅಂತು ಇಂತು ನಿನ್ನೆ ಮಧ್ಯಾಹ್ನದಿಂದ ಜಿಲ್ಲೆಯಲ್ಲಿ ವರುಣರಾಯ ಕೃಪೆ ತೋರಿ, ನಿರಂತರ ಮಳೆ ಬರುತ್ತಿದೆ.
ತುಂಗ-ಭದ್ರಾ ಜಲನಯನ ಪ್ರದೇಶಗಳಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಮುಂಗಾರು ಅಬ್ಬರಿಸುತ್ತಿದ್ದು, ತುಂಗಾ ಅಣೆಕಟ್ಟೆಯಿಂದ ಎಲ್ಲಾ ಕ್ರಸ್ಟ್ಗೇಟ್ಗಳನ್ನು ತೆರೆದು ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗಿದೆ. ತುಂಗೆ ಗಂಭೀರವಾಗಿ ಹರಿಯುತ್ತಿದ್ದಾಳೆ.

ನಗರದ ಕೋಟೆ ರಸ್ತೆ ಕೋರ್ಪಲಯ್ಯ ಛತ್ರ ಬಳಿ ತುಂಗಾ ಮಂಟಪ ಮುಳುಗಲು ಕೆಲವೇ ಇಂಚುಗಳು ಬಾಕಿ ಇದೆ. ಈ ಸ್ಥಳಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನರು ತೆರಳುತ್ತಿದ್ದು, ಮೈದುಂಬಿ ಹರಿಯುವ ತುಂಗೆಯನ್ನು ನೋಡಿ ಪುಳಕಿತರಾಗುತ್ತಿದ್ದಾರೆ.
