ಶಿವಮೊಗ್ಗ,ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರ ೭೮ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಜೂನ್ ೧೨ರಿಂದ ಮುಂದಿನ ವರ್ಷ ೨೦೨೭ರ ಜೂನ್ ೧೦ರವರೆಗೆ ನವ್ಯಶ್ರೀ ಅನ್ನದಾನಂ ಮೂಲಕ ಒಂದು ವರ್ಷ ಅನ್ನದಾನದ ಸೇವೆಗೆ ಒಂದು ಲಕ್ಷ ರೂ. ದೇಣಿಗೆ ನೀಡಲಾಗಿದೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕರಾದ ಕಾಂತೇಶ್ ಈಶ್ವರಪ್ಪ ತಿಳಿಸಿದರು.
ಕೆ.ಎಸ್. ಈಶ್ವರಪ್ಪನವರ ೭೮ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಲ್ಲಿನ ಮಲ್ಲೇಶ್ವರ ನಗರದ ಗುಂಡಪ್ಪ ಶೆಡ್ನಲ್ಲಿ ಜೂ.೧೦ರಂದು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಸಂದರ್ಭದಲ್ಲಿ ಒಂದು ಲಕ್ಷ ರೂ.ನ ಚೆಕ್ ಹಸ್ತಾಂತರಿಸಿ ಅವರು ಮಾತನಾಡಿದರು.ಅತ್ಯಂತ ಶ್ರೇಷ್ಠ ದಾನಗಳಲ್ಲಿ ಅನ್ನದಾನ ಸಹ ಒಂದು. ಮನುಷ್ಯಗೆ ಧನ, ಕನಕ, ಆಸ್ತಿ ಅಥವಾ ಮತ್ತಿನ್ಯಾವ ಸಂಪತ್ತನ್ನು ದಾನವಾಗಿ ನೀಡಿದರೂ ಸಂತೃಪ್ತಿ ಪಡಿಸಲು ಸಾಧ್ಯವಿಲ್ಲ. ಇನ್ನಷ್ಟು ಬೇಕು, ಮತ್ತಷ್ಟು ಸಿಕ್ಕಿದ್ದರೆ ಚೆನ್ನಾಗಿತ್ತು ಎಂಬ ಲಾಲಸೆ ಸಹಜ. ಆದರೆ ಹಸಿದವರಿಗೆ ಅನ್ನವನ್ನು ಹೊಟ್ಟೆ ತುಂಬಾ ನೀಡಿದರೆ ಆತ ಸಂತೃಪ್ತನಾಗುತ್ತಾನೆ. ಹೊಟ್ಟೆ ತುಂಬಿದ ನಂತರ ತಿನ್ನಲು ಮತ್ತಷ್ಟು ಅನ್ನ ನೀಡಿದರೂ ಆತ ಅದನ್ನು ಸೇವಿಸುವುದಿಲ್ಲ ಎಂದು ತಿಳಿಸಿದರು.
ನವ್ಯಶ್ರೀ ಈಶ್ವರವನ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ನವ್ಯಶ್ರೀ ನಾಗೇಶ್, ನವ್ಯಶ್ರೀ ಅನ್ನದಾನಂನ ಸೇವಾಕರ್ತರುಗಳಾದ ನಾಗರಾಜ ಶೆಟ್ಟರ್, ಸಂತೋಷ್ ಎಲಿಗಾರ್, ಬಿ. ಪಾರ್ಶನಾಥ್, ನಾಗೇಂದ್ರ ಶಿರೂರ್ಕರ್, ಜಿ.ಎಸ್. ಮಮತಾ, ಯಶೋಧರ, ಉಮೇಶ್ ಆರಾಧ್ಯ, ಅಣಜಿ ಬಸವರಾಜ್, ಎಂ. ಶ್ರೀಕಾಂತ್, ದಿನೇಶ್, ಶ್ರೀಧರ್ ಮತ್ತಿತರರು ಭಾಗವಹಿಸಿದ್ದರು.


