ನವದೆಹಲಿ, ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗಳ ಚುನಾವಣೆ ಮುಗಿದಿದ್ದು, ಮೇ 4ರಂದು ಅಧಿಕೃತ ಮತ ಎಣಿಕೆ ನಡೆಯಲಿದೆ. ನೆನ್ನೆ ಪಶ್ಚಿಮ ಬಂಗಾಳದಲ್ಲಿ 2ನೇ ಹಂತದ ಎರಡನೇ ಹಂತದ ಮತದಾನ ಮುಕ್ತಾಯವಾಗಿದೆ.
ಇದರ ಬೆನ್ನಲ್ಲೇ, ಎಕ್ಸಿಟ್ ಪೋಲ್ ಸಮೀಕ್ಷೆಗಳು ಹೊರಬಿದ್ದಿವೆ.ಎಕ್ಸಿಟ್ ಪೋಲ್ಗಳ ಪ್ರಕಾರ, ಕೇರಳದಲ್ಲಿ ಈ ಬಾರಿ ಆಡಳಿತಾರೂಢ ಎಲ್ಡಿಎಫ್ಗೆ ಸೋಲಾಗಲಿದ್ದು, ಯುಡಿಎಫ್ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ. ಅಸ್ಸಾಂನಲ್ಲಿ ಬಿಜೆಪಿ, ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಟಿಎಂಸಿ ನಡುವೆ ಬಿರುಸಿನ ಸ್ಪರ್ಧೆ ಇರಲಿದೆ, ಹೆಚ್ಚೂ ಕಡಿಮೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ಹಲವಾರು ಸಮೀಕ್ಷೆಗಳು ಹೇಳಿವೆ.
ಪಶ್ಚಿಮ ಬಂಗಾಳ ವಿಧಾನಸಭೆ :
ದೇಶದ ಗಮನ ಸೆಳೆದಿರುವ, ಭಾರೀ ಜಿದ್ದಾಜಿದ್ದಿನ ಕಣವಾಗಿರುವ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ.
ಪೋಲ್ ಆಫ್ ಎಕ್ಸಿಟ್ ಸಮೀಕ್ಷೆಯ ಪ್ರಕಾರ, ಟಿಎಂಸಿ 144, ಬಿಜೆಪಿ 143 ಕಾಂಗ್ರೆಸ್ 5 ಸ್ಥಾನ ಪಡೆದರೆ, ಪಿ ಮಾರ್ಕ್ ಸಮೀಕ್ಷೆಯ ಪ್ರಕಾರ ಟಿಎಂಸಿ 118-138, ಬಿಜೆಪಿ 150-175 ಸ್ಥಾನ ಪಡೆಯಲಿದೆ.
ಮ್ಯಾಟ್ರೀಜ್ ಸಮೀಕ್ಷೆ ಹೇಳುವಂತೆ ಟಿಎಂಸಿ 125-140, ಬಿಜೆಪಿ 146-161 ಸ್ಥಾನ ಪಡೆದು ಅಧಿಕಾರಕ್ಕೆ ಬರಲಿದೆ ಎಂದಿದೆ.
ಪೀಪಲ್ಸ್ ಪಲ್ಸ್ ಪ್ರಕಾರ, ಟಿಎಂಸಿ 178-189, ಬಿಜೆಪಿ 95-110 ಸ್ಥಾನ ಪಡೆಯಲಿದ್ದು, ಆಡಳಿತಾರೂಢ ಪಕ್ಷ ಮರಳಿ ಅಧಿಕಾರಿ ಹಿಡಿಯಲಿದೆ ಎಂದಿದೆ.
ಚಾಣಕ್ಯ ಸ್ಟ್ರಾಟರ್ಜಿ ಪ್ರಕಾರ, ಟಿಎಂಸಿ 130-140, ಬಿಜೆಪಿ 150-160 ಸ್ಥಾನ ಪಡೆಯಲಿದೆ ಎಂದು ಹೇಳಿದೆ.
ಕೇರಳ ವಿಧಾನಸಭೆ:
ಆ್ಯಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ, ಎಲ್ಡಿಎಫ್ 49-62, ಯುಡಿಎಫ್ 78-90 ಸ್ಥಾನ ಪಡೆದರೆ, ಪೋಲ್ ಆಫ್ ಎಕ್ಸಿಟ್ ಪ್ರಕಾರ, ಎಲ್ಡಿಎಫ್ 90, ಯುಡಿಎಫ್ 77, ಪಿ-ಮಾರ್ಕ್ ಹೇಳುವಂತೆ ಎಲ್ಡಿಎಫ್ 62-69, ಯುಡಿಎಫ್ 71-79 ಸ್ಥಾನ ಪಡೆಯಲಿದೆ.
ಅದೇ ರೀ,ತಿ ಮ್ಯಾಟ್ರಿಜ್ ಎಲ್ಡಿಎಫ್ಗೆ 60-65, ಯುಡಿಎಫ್ಗೆ 70-75 ಸ್ಥಾನ ನೀಡಿದೆ.
ಪೀಪಲ್ಸ್ ಪಲ್ಸ್ ಎಲ್ಡಿಎಫ್ಗೆ 55-65, ಯುಡಿಎಫ್ಗೆ 75-85 ಸ್ಥಾನ ಸಿಗುವುದಾಗಿ ಭವಿಷ್ಯ ನುಡಿದಿವೆ.
ಅಸ್ಸಾಂ ವಿಧಾನಸಭೆ:
ಅಸ್ಸಾಂನಲ್ಲಿ ಈ ಬಾರಿಯೂ ಬಿಜೆಪಿ ಬಾವುಟ ಹಾರಲಿದೆ ಎಂದು ಎಲ್ಲ ಸಮೀಕ್ಷೆಗಳು ಹೇಳಿವೆ.
ಆ್ಯಕ್ಸಿಸ್ ಮೈ ಇಂಡಿಯಾ ಹೇಳುವಂತೆ ಬಿಜೆಪಿ ಮೈತ್ರಿ 88-100, ಕಾಂಗ್ರೆಸ್ ಮೈತ್ರಿ 24-36, ಪೋಲ್ ಆಫ್ ಎಕ್ಸಿಟ್ ಬಿಜೆಪಿ ಮೈತ್ರಿ 88, ಕಾಂಗ್ರೆಸ್ ಮೈತ್ರಿ 27 ಹಾಗೂ ಜೆಪಿಸಿ ಸಮೀಕ್ಷೆ ಪ್ರಕಾರ, ಬಿಜೆಪಿ ಮೈತ್ರಿ 88-101, ಕಾಂಗ್ರೆಸ್ ಮೈತ್ರಿ 23-33 ಸ್ಥಾನ ಪಡೆಯಲಿದೆ.
ಪಿ-ಮಾರ್ಕ್ ಪ್ರಕಾರ, ಬಿಜೆಪಿ ಮೈತ್ರಿ 82-94, ಕಾಂಗ್ರೆಸ್ ಮೈತ್ರಿ 30-40, ಮ್ಯಾಟ್ರಿಜ್ ಸಮೀಕ್ಷೆಯು, ಕಾಂಗ್ರೆಸ್ ಮೈತ್ರಿ 25-32 ಬಿಜೆಪಿ ಮೈತ್ರಿಗೆ 85-95, ಪೀಪಲ್ಸ್ ಪಲ್ಸ್ ಪ್ರಕಾರ, ಬಿಜೆಪಿ ಮೈತ್ರಿ 68-72, ಕಾಂಗ್ರೆಸ್ ಮೈತ್ರಿ 22-26 ಸ್ಥಾನ ಹಾಗೂ ಪೋಲ್ ಡೈರಿ ಸಮೀಕ್ಷೆ ಹೇಳುವಂತೆ, ಕಾಂಗ್ರೆಸ್ ಮೈತ್ರಿ 15-26, ಬಿಜೆಪಿ ಮೈತ್ರಿ 86-101 ಸ್ಥಾನ ಪಡೆಯಲಿದೆ.

