ಶಿವಮೊಗ್ಗ ,ಕರ್ನಾಟಕದ ರಾಜ್ಯ ಸರ್ಕಾರವು ಕೆಎಸ್ಆರ್ಟಿಸಿ ಸೇರಿದಂತೆ ರಾಜ್ಯದ ಮೂರು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಸರಾಸರಿ ಶೇ.23ರಷ್ಟು ಹಾಗೂ ಬಿಎಂಟಿಸಿ ಪ್ರಯಾಣ ದರವನ್ನು ಶೇ.33ರಿಂದ 35ರಷ್ಟು ಹೆಚ್ಚಿಸಿರುವ ನಿರ್ಧಾರವನ್ನು ಜಾತ್ಯತೀತ ಜನತಾದಳದ ಶಿವಮೊಗ್ಗ ನಗರ ಘಟಕದ ಅಧ್ಯಕ್ಷ ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯ ದೀಪಕ್ ಸಿಂಗ್ ತೀವ್ರವಾಗಿ ಖಂಡಿಸಿದ್ದಾರೆ.
2025ರ ಜನವರಿಯಲ್ಲಿ ಶೇ.15ರಷ್ಟು ಪ್ರಯಾಣ ದರ ಹೆಚ್ಚಿಸಿದ್ದ ಸರ್ಕಾರ, ಎರಡು ವರ್ಷಗಳು ಪೂರ್ಣಗೊಳ್ಳುವ ಮೊದಲೇ ಮತ್ತೊಮ್ಮೆ ಭಾರೀ ಪ್ರಮಾಣದಲ್ಲಿ ದರ ಏರಿಕೆ ಮಾಡಿರುವುದು ಜನಸಾಮಾನ್ಯರ ಆರ್ಥಿಕ ಹೊರೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ಸಾರಿಗೆ ಸಂಸ್ಥೆಗಳ ನಷ್ಟವನ್ನು ಕಡಿಮೆ ಮಾಡಲು ಪ್ರಯಾಣ ದರ ಏರಿಕೆಯೊಂದೇ ಮಾರ್ಗವೇ? ನಿಗಮಗಳ ಆರ್ಥಿಕ ನಿರ್ವಹಣೆಯನ್ನು ಸುಧಾರಿಸಲು ನಿಮ್ಮ ಸರ್ಕಾರ ಇದುವರೆಗೆ ಕೈಗೊಂಡಿರುವ ಕ್ರಮಗಳೇನು? ಎಂದು ಪ್ರಶ್ನಿಸಿದ್ದಾರೆ.
ಸಾರಿಗೆ ಸಚಿವರೇ ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ, ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಒಟ್ಟು ನಷ್ಟ ಸುಮಾರು ₹10,200 ಕೋಟಿಗೆ ತಲುಪಿದೆ. ಸರ್ಕಾರದಿಂದ ಸಾರಿಗೆ ನಿಗಮಗಳಿಗೆ ಪಾವತಿಯಾಗಬೇಕಾದ ಬಾಕಿ ಸುಮಾರು ₹6,362 ಕೋಟಿ ಇದೆ ಎನ್ನಲಾಗಿದೆ. ಇದರಲ್ಲಿ ಶಕ್ತಿ ಯೋಜನೆಯ ಮರುಪಾವತಿ ಬಾಕಿಯೂ ಸೇರಿದೆ.
ಸರ್ಕಾರವೇ ಪಾವತಿಸಬೇಕಾದ ಸಾವಿರಾರು ಕೋಟಿ ರೂಪಾಯಿ ಬಾಕಿ ಇರುವಾಗ, ಸಾರಿಗೆ ನಿಗಮಗಳ ಆರ್ಥಿಕ ಸಂಕಷ್ಟಕ್ಕೆ ಪರಿಹಾರವಾಗಿ ಪ್ರಯಾಣಿಕರ ಮೇಲೆ ಹೆಚ್ಚುವರಿ ಹೊರೆ ಹೇರುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?

ಇದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ರಾಜ್ಯದ ಜನತೆಗೆ ಉತ್ತರಿಸಬೇಕಾದ ಪ್ರಮುಖ ಪ್ರಶ್ನೆಯಾಗಿದೆ ಎಂದಿದ್ದಾರೆ
ಬೆಂಗಳೂರಿನಲ್ಲಿ ಕನಿಷ್ಠ ಬಸ್ ಪ್ರಯಾಣ ದರ ₹6ರಿಂದ ₹10ಕ್ಕೆ ಏರಿಕೆಯಾಗಿದೆ. ಅಂದರೆ ಕನಿಷ್ಠ ಪ್ರಯಾಣ ದರದಲ್ಲೇ ಶೇ.66ಕ್ಕೂ ಹೆಚ್ಚು ಹೆಚ್ಚಳವಾಗಿದೆ.
ಮುಖ್ಯಮಂತ್ರಿಗಳೇ, ಸಾಮಾನ್ಯ ಕಾರ್ಮಿಕರ ವೇತನ ಶೇ.66ರಷ್ಟು ಏರಿಕೆಯಾಗಿದೆಯೇ? ಖಾಸಗಿ ಉದ್ಯೋಗಿಗಳ ಸಂಬಳ ಶೇ.35ರಷ್ಟು ಹೆಚ್ಚಾಗಿದೆಯೇ? ಹಾಗಿದ್ದರೆ ಸಾರ್ವಜನಿಕ ಸಾರಿಗೆಯನ್ನು ಈ ಪ್ರಮಾಣದಲ್ಲಿ ದುಬಾರಿಗೊಳಿಸುವ ನಿರ್ಧಾರಕ್ಕೆ ಆಧಾರವೇನು?
ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಸಣ್ಣ ವ್ಯಾಪಾರಿಗಳು ಹಾಗೂ ಪ್ರತಿದಿನ ಉದ್ಯೋಗಕ್ಕಾಗಿ ನಗರಗಳಿಗೆ ಪ್ರಯಾಣಿಸುವ ಲಕ್ಷಾಂತರ ಜನರಿಗೆ ಕೈಗೆಟುಕುವ ಸಾರ್ವಜನಿಕ ಸಾರಿಗೆ ಅತ್ಯಗತ್ಯ.ಈ ಜನರ ಪ್ರಯಾಣ ವೆಚ್ಚ ಹೆಚ್ಚಾದಾಗ ಅವರ ಕುಟುಂಬದ ಮಾಸಿಕ ಖರ್ಚಿನ ಮೇಲೂ ನೇರ ಪರಿಣಾಮ ಬೀರುತ್ತದೆ.ಕಾಂಗ್ರೆಸ್ ಸರ್ಕಾರವು ತನ್ನ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ನಿರಂತರವಾಗಿ ಪ್ರಚಾರ ಮಾಡುತ್ತಿದೆ. ಆದರೆ ಗ್ಯಾರಂಟಿ ಯೋಜನೆಗಳ ಜೊತೆಗೆ ಸಾರ್ವಜನಿಕ ಸಾರಿಗೆಯ ಆರ್ಥಿಕ ಸುಸ್ಥಿರತೆಯನ್ನು ಕಾಪಾಡಿಕೊಳ್ಳಲು ರೂಪಿಸಿರುವ ದೀರ್ಘಕಾಲೀನ ಯೋಜನೆ ಯಾವುದು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು..? ಎಂದಿದ್ದಾರೆ.
ಶಕ್ತಿ ಯೋಜನೆಯ ಫಲಾನುಭವಿಗಳ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ, ಇತರ ಪ್ರಯಾಣಿಕರಿಗೂ ಕೈಗೆಟುಕುವ ದರದಲ್ಲಿ ಸಾರಿಗೆ ಸೇವೆ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಗ್ಯಾರಂಟಿ ಯೋಜನೆಗಳ ಯಶಸ್ಸಿನ ಬಗ್ಗೆ ಮಾತನಾಡುವ ಸರ್ಕಾರ, ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಯ ಬಗ್ಗೆಯೂ ಅಷ್ಟೇ ಪಾರದರ್ಶಕವಾಗಿ ಜನರಿಗೆ ಲೆಕ್ಕ ನೀಡಬೇಕು.ಡೀಸೆಲ್ ಬೆಲೆ, ಸಿಬ್ಬಂದಿ ವೇತನ ಹಾಗೂ ನಿರ್ವಹಣಾ ವೆಚ್ಚ ಏರಿಕೆಯಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಈ ವೆಚ್ಚಗಳ ಹೆಚ್ಚಳವನ್ನು ನಾವು ನಿರ್ಲಕ್ಷಿಸುವುದಿಲ್ಲ. ಆದರೆ ಅದರ ಸಂಪೂರ್ಣ ಪರಿಹಾರವನ್ನು ಪ್ರಯಾಣಿಕರ ಜೇಬಿನಿಂದಲೇ ಹುಡುಕುವ ಬದಲು, ಪರ್ಯಾಯ ಆರ್ಥಿಕ ಕ್ರಮಗಳನ್ನು ಸರ್ಕಾರ ಏಕೆ ಪರಿಶೀಲಿಸಬಾರದು?

ಸರ್ಕಾರವು ಕೂಡಲೇ ಈ ಪ್ರಶ್ನೆಗಳಿಗೆ ಉತ್ತರ ನೀಡಬೇಕು:
1. ಸಾರಿಗೆ ನಿಗಮಗಳಿಗೆ ಪಾವತಿಸಬೇಕಾದ ಬಾಕಿ ಮೊತ್ತವನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಲು ನಿಗದಿಪಡಿಸಿರುವ ಕಾಲಮಿತಿ ಯಾವುದು?
2. ಕಳೆದ ಮೂರು ವರ್ಷಗಳಲ್ಲಿ ಸಾರಿಗೆ ನಿಗಮಗಳ ಆದಾಯ, ವೆಚ್ಚ, ನಷ್ಟ ಮತ್ತು ಸಾಲದ ವಿವರಗಳೇನು?
3. 2025ರಲ್ಲಿ ಶೇ.15ರಷ್ಟು ದರ ಏರಿಸಿದ ನಂತರ ಸಂಗ್ರಹವಾದ ಹೆಚ್ಚುವರಿ ಆದಾಯವನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ?
4. ಪ್ರಸ್ತುತ ದರ ಏರಿಕೆಯಿಂದ ಸರ್ಕಾರ ನಿರೀಕ್ಷಿಸುತ್ತಿರುವ ಹೆಚ್ಚುವರಿ ಆದಾಯ ಎಷ್ಟು? ಅದರಿಂದ ನಿಗಮಗಳ ನಷ್ಟ ಎಷ್ಟರಮಟ್ಟಿಗೆ ಕಡಿಮೆಯಾಗಲಿದೆ?5. ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ದಿನನಿತ್ಯದ ಪ್ರಯಾಣಿಕರಿಗೆ ಈ ದರ ಏರಿಕೆಯಿಂದ ಪರಿಹಾರ ನೀಡಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ?
ಸಾರ್ವಜನಿಕ ಸಾರಿಗೆ ಎಂಬುದು ಕೇವಲ ಲಾಭ-ನಷ್ಟದ ಲೆಕ್ಕಾಚಾರಕ್ಕೆ ಸೀಮಿತವಾದ ವ್ಯವಹಾರವಲ್ಲ. ಅದು ಬಡವರು ಮತ್ತು ಮಧ್ಯಮ ವರ್ಗದ ಜನರ ಜೀವನೋಪಾಯಕ್ಕೆ ಸಂಬಂಧಿಸಿದ ಮೂಲಭೂತ ಸಾರ್ವಜನಿಕ ಸೇವೆಯಾಗಿದೆ.
ಸರ್ಕಾರದ ಆರ್ಥಿಕ ನಿರ್ಧಾರಗಳ ಪರಿಣಾಮವನ್ನು ಜನಸಾಮಾನ್ಯರ ಮೇಲೆ ಹೇರುವ ಮೊದಲು, ಆ ನಿರ್ಧಾರಗಳ ಅಗತ್ಯತೆ ಮತ್ತು ನ್ಯಾಯಸಮ್ಮತತೆಯನ್ನು ಜನರ ಮುಂದೆ ಸಾಬೀತುಪಡಿಸಬೇಕು.ಆದ್ದರಿಂದ ಕಾಂಗ್ರೆಸ್ ಸರ್ಕಾರವು ನೂತನ ಬಸ್ ಪ್ರಯಾಣ ದರ ಏರಿಕೆಯನ್ನು ತಕ್ಷಣ ಮರುಪರಿಶೀಲಿಸಬೇಕು.

ಸಾರಿಗೆ ನಿಗಮಗಳ ಸಂಪೂರ್ಣ ಆರ್ಥಿಕ ಸ್ಥಿತಿಯ ಕುರಿತು ಶ್ವೇತಪತ್ರ ಪ್ರಕಟಿಸಬೇಕು. ಸರ್ಕಾರಿ ಬಾಕಿ ಪಾವತಿಗೆ ಕಾಲಮಿತಿ ನಿಗದಿಪಡಿಸಬೇಕು. ಸಾಮಾನ್ಯ ಪ್ರಯಾಣಿಕರಿಗೆ ಹೊರೆಯಾಗದ ಪರ್ಯಾಯ ಆದಾಯ ಮತ್ತು ವೆಚ್ಚ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಬೇಕು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ಸಾರಿಗೆ ನಿಗಮಗಳ ಆರ್ಥಿಕ ಸಂಕಷ್ಟವನ್ನು ಬಗೆಹರಿಸುವಲ್ಲಿ ನಿಮ್ಮ ಸರ್ಕಾರದ ಜವಾಬ್ದಾರಿ ಏನು ಎಂಬುದನ್ನು ಜನರಿಗೆ ವಿವರಿಸಿ. ಬಸ್ ಪ್ರಯಾಣ ದರ ಹೆಚ್ಚಳದ ನಿರ್ಧಾರಕ್ಕೆ ಸಾರ್ವಜನಿಕವಾಗಿ ಸಮರ್ಥನೆ ನೀಡಿ.
ಸರ್ಕಾರ ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಜನಸಾಮಾನ್ಯರ ಹಿತಾಸಕ್ತಿಯನ್ನು ರಕ್ಷಿಸಲು ಜಾತ್ಯತೀತ ಜನತಾದಳವು ಪ್ರಜಾಸತ್ತಾತ್ಮಕ ಹೋರಾಟ ನಡೆಸಲಿದೆ ಎಂದು ದೀಪಕ್ ಸಿಂಗ್ ತಿಳಿಸಿದ್ದಾರೆ.
