ನವದೆಹಲಿಯಲ್ಲಿ ಉಸಿರುಗಟ್ಟಿಸುವ ವಾತಾವರಣ: 482ಕ್ಕೆ ತಲುಪಿದ ವಾಯು ಗುಣಮಟ್ಟ, ಪರಿಸ್ಥಿತಿ ಗಂಭೀರ

ನವ ದೆಹಲಿ

ನವದೆಹಲಿ,ದೇಶದ ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣವು ಅತ್ಯಂತ ಅಪಾಯಕಾರಿ ಮಟ್ಟಕ್ಕೆ ತಲುಪಿದ್ದು, ಗುರುವಾರ ಬೆಳಿಗ್ಗೆ (ನವೆಂಬರ್ 5, 2026) ಒಟ್ಟಾರೆ ವಾಯು ಗುಣಮಟ್ಟ ಸೂಚಿ (AQI) 482ಕ್ಕೆ ಏರಿಕೆಯಾಗಿದೆ. ಈ ಮೂಲಕ ದೆಹಲಿಯು ‘ಅತ್ಯಂತ ಗಂಭೀರ’ ಮತ್ತು ‘ಅಪಾಯಕಾರಿ’ ಮಾಲಿನ್ಯದ ವಲಯಕ್ಕೆ ಜಾರಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಟಿಸಿದೆ.ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ನಗರದ ಏಳು ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳಲ್ಲಿ AQI ಪ್ರಮಾಣ 400ಕ್ಕಿಂತ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಇದು ಗಂಭೀರ ವಾಯುಮಾಲಿನ್ಯದ ಸೂಚಕವಾಗಿದೆ.

ಪಂಜಾಬಿ ಬಾಗ್‌ನಲ್ಲಿ ಗರಿಷ್ಠ 446 AQI ದಾಖಲಾಗಿದ್ದು, ನಂತರದ ಸ್ಥಾನಗಳಲ್ಲಿ ನರೇಲಾ (434), ರೋಹಿಣಿ (431), ಆರ್.ಕೆ. ಪುರಂ (416), ಬವಾನಾ (412), ದೆಹಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್ (408) ಹಾಗೂ ಪಟ್ಪರ್‌ಗಂಜ್ (405) ಇವೆ.ನಗರದ ಹಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟ ‘ಅತ್ಯಂತ ಕಳಪೆ’ ವಿಭಾಗದಲ್ಲಿಯೇ ಮುಂದುವರಿದಿದೆ. ಓಖ್ಲಾ ಫೇಸ್-2 ಮತ್ತು ಇಂಡಿಯಾ ಗೇಟ್‌ನಲ್ಲಿ ತಲಾ 399, ಐಟಿಒದಲ್ಲಿ 397 ಹಾಗೂ ದ್ವಾರಕಾ ಸೆಕ್ಟರ್-8ರಲ್ಲಿ 396 AQI ದಾಖಲಾಗಿದೆ. ಚಾಂದನಿ ಚೌಕ್‌ನಲ್ಲಿ 356 ಹಾಗೂ ವಸುಂಧರಾ ಎನ್‌ಕ್ಲೇವ್‌ನಲ್ಲಿ 330 ಸೂಚ್ಯಂಕ ದಾಖಲಾಗಿದೆ.ಆನಂದ್ ವಿಹಾರ್‌ನಲ್ಲಿ AQI 293 ದಾಖಲಾಗಿದ್ದರೆ, ಭಾರತೀಯ ಹವಾಮಾನ ಇಲಾಖೆಯ ಲೋಧಿ ರಸ್ತೆಯ ಕೇಂದ್ರದಲ್ಲಿ 268 ದಾಖಲಾಗಿದೆ.

ಈ ಎರಡೂ ಪ್ರದೇಶಗಳು ‘ಕಳಪೆ’ ವಾಯು ಗುಣಮಟ್ಟದ ವಿಭಾಗದಲ್ಲಿವೆ.ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಬೆನ್ನಲ್ಲೇ ಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ವಾಯು ಗುಣಮಟ್ಟ ಮುನ್ನೆಚ್ಚರಿಕೆ ವ್ಯವಸ್ಥೆಯ ಪ್ರಕಾರ, ನವೆಂಬರ್ 6 ಮತ್ತು 7ರಂದು ದೆಹಲಿಯ ವಾಯು ಗುಣಮಟ್ಟ ಮತ್ತೆ ‘ಗಂಭೀರ’ ಹಂತಕ್ಕೆ ತಲುಪುವ ಸಾಧ್ಯತೆಯಿದೆ. ನಂತರದ ಆರು ದಿನಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿಯುವ ಮುನ್ಸೂಚನೆ ಇದೆ.ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳ ಪ್ರಕಾರ, ಬುಧವಾರ ದೆಹಲಿಯ ಸರಾಸರಿ AQI 377 ದಾಖಲಾಗಿತ್ತು. ಇದು ಕಳೆದ 288 ದಿನಗಳಲ್ಲೇ ಅತ್ಯಂತ ಕಳಪೆ ಮಟ್ಟವಾಗಿದೆ.

Author