“ಸನಾತನ ಧರ್ಮ ನಿರ್ಮೂಲನೆ ಮಾಡಬೇಕು” : ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ತಮಿಳುನಾಡು ಶಾಸಕ ಉದಯನಿಧಿ ಸ್ಟಾಲಿನ್..!

ರಾಜಕೀಯ

“ಸನಾತನ ಧರ್ಮ ಜನರನ್ನು ವಿಭಜಿಸುತ್ತದೆ, ಅದನ್ನು ನಿರ್ಮೂಲನೆ ಮಾಡಬೇಕು” ಎಂದು ತಮಿಳುನಾಡು ಶಾಸಕ ಉದಯನಿಧಿ ಸ್ಟಾಲಿನ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

“ಅಲೆಕ್ಸಾಂಡರ್, ಘೋರಿ, ಗಜ್ನಿ, ಬ್ರಿಟಿಷರು, ಫ್ರೆಂಚರು ಹಾಗೂ ಕಮ್ಯುನಿಸ್ಟರಿಂದಲೂ ಸನಾತನ ಧರ್ಮವನ್ನು ಅಳಿಸಲು ಸಾಧ್ಯವಾಗಲಿಲ್ಲ, ಇನ್ನು ಸ್ವಂತ ಕುಟುಂಬಸ್ಥರಿಗೇ ಒಪ್ಪಿಸಲಾಗದ ವ್ಯಕ್ತಿಯಿಂದ ಇದು ಸಾಧ್ಯವೇ?” ಎಂದು ಸ್ಟಾಲಿನ್‌ ಪುತ್ರನ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿಎಲ್ ಸಂತೋಷ್ ಅವರು, ಭಾರತೀಯ ಇತಿಹಾಸದ ಮೇಲೆ ದಾಳಿ ಮಾಡಿದ ಪರಕೀಯರನ್ನು ಉಲ್ಲೇಖಿಸುವ ಮೂಲಕ ಸನಾತನ ಧರ್ಮದ ಗಟ್ಟಿತನವನ್ನು ಪ್ರತಿಪಾದಿಸಿದ್ದಾರೆ.

“ಅಲೆಕ್ಸಾಂಡರ್, ಘೋರಿ, ಗಜ್ನಿ, ಖಿಲ್ಜಿ, ಬ್ರಿಟಿಷರು, ಫ್ರೆಂಚರು ಮತ್ತು ಕಮ್ಯುನಿಸ್ಟರಿಗೂ ಸನಾತನ ಧರ್ಮವನ್ನು ಅಳಿಸಲು ಸಾಧ್ಯವಾಗಲಿಲ್ಲ… ಆದರೀಗ ತನ್ನ ಸ್ವಂತ ಕುಟುಂಬದವರನ್ನೇ ಈ ಬಗ್ಗೆ ಒಪ್ಪಿಸಲು ಸಾಧ್ಯವಾಗದ ವ್ಯಕ್ತಿಯೊಬ್ಬರು ಸನಾತನ ಧರ್ಮವನ್ನು ಅಳಿಸುವ ಮಾತನಾಡುತ್ತಿದ್ದಾರೆ!! ಭಾರತ ಮತ್ತು ಸನಾತನ ಧರ್ಮವು ಕಾಲದ ಪರೀಕ್ಷೆಗಳನ್ನು ಮತ್ತು ತಲೆಮಾರುಗಳನ್ನು ಮೀರಿ ಗಟ್ಟಿಯಾಗಿ ನಿಂತಿದೆ” ಎಂದು ಹೇಳಿದ್ದಾರೆ.

ಬಿಎಲ್ ಸಂತೋಷ್ ಅವರು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ‘ಸ್ವಂತ ಕುಟುಂಬದವರನ್ನೇ ಒಪ್ಪಿಸಲು ಸಾಧ್ಯವಾಗದ ವ್ಯಕ್ತಿ’ ಎಂಬ ಸಾಲು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದು ಉದಯನಿಧಿ ಸ್ಟಾಲಿನ್ ಅವರ ತಾಯಿ ಹಾಗೂ ಮಾಜಿ ಸಿಎಂ ಎಂಕೆ ಸ್ಟಾಲಿನ್ ಅವರ ಪತ್ನಿ ದುರ್ಗಾ ಸ್ಟಾಲಿನ್ ಅವರನ್ನು ಉದ್ದೇಶಿಸಿ ನೀಡಿದ ಟಾಂಗ್ ಎನ್ನಲಾಗಿದೆ.

ದುರ್ಗಾ ಸ್ಟಾಲಿನ್ ಅವರು ತೀವ್ರ ದೈವಭಕ್ತರಾಗಿದ್ದು, ಆಗಾಗ್ಗೆ ದೇವಸ್ಥಾನಗಳಿಗೆ ಭೇಟಿ ನೀಡುವ, ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸುವ ಫೋಟೋಗಳು ವೈರಲ್ ಆಗುತ್ತಿರುತ್ತವೆ. ಸ್ವತಃ ಮನೆಯಲ್ಲೇ ಸನಾತನ ಧರ್ಮದ ಆಚರಣೆಗಳನ್ನು ತಡೆಯಲು ಸಾಧ್ಯವಾಗದವರು ಇಡೀ ಸಮಾಜದಿಂದ ಅದನ್ನು ಅಳಿಸುವ ಮಾತುಗಳನ್ನಾಡುತ್ತಿದ್ದಾರೆ ಎಂದು ಬಿಎಲ್ ಸಂತೋಷ್ ಲೇವಡಿ ಮಾಡಿದಂತಿದೆ.

ತಮಿಳುನಾಡು ಸರ್ಕಾರದ 2 ನೇ ದಿನದ ಅಧಿವೇಶನದಲ್ಲಿ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮ ಜನರನ್ನು ವಿಭಜಿಸುತ್ತದೆ, ಅದನ್ನು ನಿರ್ಮೂಲನೆ ಮಾಡಬೇಕು ಎಂದರು. ಜತೆಗೆ ಸಿಎಂ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ವಂದೇ ಮಾತರಂ ಮೊಳಗಿದ್ದಕ್ಕೂ ಕಿಡಿಕಾರಿದ್ದರು.

ಈ ಹಿಂದೆ ಚೆನ್ನೈನಲ್ಲಿ ನಡೆದ ‘ಸನಾತನ ನಿರ್ಮೂಲನಾ ಸಮಾವೇಶ’ದಲ್ಲಿ ಮಾತನಾಡಿದ್ದ ಉದಯನಿಧಿ , “ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಕೆಲವು ವಿಷಯಗಳನ್ನು ಕೇವಲ ವಿರೋಧಿಸಿದರೆ ಸಾಲದು, ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು.

ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಮತ್ತು ಕೊರೊನಾವನ್ನು ನಾವು ಹೇಗೆ ವಿರೋಧಿಸುವುದಿಲ್ಲವೋ, ಬದಲಾಗಿ ನಿರ್ಮೂಲನೆ ಮಾಡುತ್ತೇವೆಯೋ, ಅದೇ ರೀತಿ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು. ಸನಾತನ ಜನರನ್ನು ಜಾತಿಯ ಆಧಾರದ ಮೇಲೆ ವಿಭಜಿಸುತ್ತದೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಉದಯನಿಧಿ ಅವರ ಆ ಹೇಳಿಕೆಯು ರಾಷ್ಟ್ರಮಟ್ಟದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ಬಿಜೆಪಿ ನಾಯಕರು ಡಿಎಂಕೆ ಹಾಗೂ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ವಿರುದ್ಧ ಮುಗಿಬಿದ್ದಿದ್ದರು. “ಇದು ಹಿಂದೂ ವಿರೋಧಿ ಮನಸ್ಥಿತಿ. ಇಂಡಿಯಾ ಮೈತ್ರಿಕೂಟದ ಅಜೆಂಡಾ ಸನಾತನ ಧರ್ಮವನ್ನು ಅಳಿಸುವುದೇ ಆಗಿದೆ” ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.

Author