ಶಿಕಾರಿಪುರ, ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಕ ಮಹಿಳೆಯೊಬ್ಬರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದ ಇಬ್ಬರು ಕಳ್ಳರನ್ನು ಶಿರಾಳಕೊಪ್ಪ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಸುಮಾರು 6.20 ಲಕ್ಷ ರೂಪಾಯಿ ಮೌಲ್ಯದ 62 ಗ್ರಾಂ ಬಂಗಾರದ ಒಡವೆಗಳನ್ನು ಜಪ್ತಿ ಮಾಡಲಾಗಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ತರಳಬಾಳು ಬಡಾವಣೆಯ ನಿವಾಸಿಯಾದ ಮಹಿಳೆಯೊಬ್ಬರು ಕಳೆದ ಏಪ್ರಿಲ್ 8ರಂದು ಶಿರಾಳಕೊಪ್ಪದಿಂದ ಹಿರೇಕೆರೂರಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ ಬಸ್ ಹತ್ತಿದ್ದರು. ಬಸ್ಸು ಸುಣ್ಣದಕೊಪ್ಪ ನಿಲ್ದಾಣದ ಹತ್ತಿರ ತಲುಪಿದಾಗ ಮಹಿಳೆ ತನ್ನ ವ್ಯಾನಿಟಿ ಬ್ಯಾಗ್ ಪರಿಶೀಲಿಸಿದ್ದಾರೆ. ಈ ವೇಳೆ ಬ್ಯಾಗಿನಲ್ಲಿದ್ದ ಚಿನ್ನದ ಆಭರಣಗಳು ಕಳುವಾಗಿರುವುದು ಅವರ ಗಮನಕ್ಕೆ ಬಂದಿದೆ. ಈ ಸಂಬಂಧ ಸಂತ್ರಸ್ತೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು.
ಈ ಕುರಿತು ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಶಿಕಾರಿಪುರ ಉಪ-ವಿಭಾಗದ ಡಿವೈಎಸ್ಪಿ ಕೇಶವ ಕೆ.ಇ ಹಾಗೂ ಶಿಕಾರಿಪುರ ನಗರ ವೃತ್ತದ ಸಿಪಿಐ ಸಂತೋಷ್ ಎಂ ಪಾಟೀಲ್ ಅವರ ನೇತೃತ್ವದ ತಂಡವು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.ಬಂಧಿತ ಆರೋಪಿಗಳನ್ನು ವೆಂಕಟೇಶ (35 ವರ್ಷ) ಮತ್ತು ಹೊಸಮನೆಯ ಮಂಜುಳಾ ಸಿ (42 ವರ್ಷ) ಎಂದು ಗುರುತಿಸಲಾಗಿದೆ. ಬಂಧಿತರಿಂದ ಕಳವು ಮಾಡಲಾಗಿದ್ದ ಒಡವೆಗಳನ್ನು ರಿಕವರಿ ಮಾಡಲಾಗಿದ್ದು, ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


