ರಾಜ್ಯದ ಸಾರಿಗೆ ಬಸ್‌ಗಳಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರ ಜೊತೆಗೆ ಪುರುಷರಿಗೂ ಸಹ ಶೀಘ್ರದಲ್ಲಿಯೇ ಸ್ಮಾರ್ಟ್ ಕಾರ್ಡ್ ಸೌಲಭ್ಯವನ್ನು ಒದಗಿಸಲಾಗುವುದು ಎಂದು ನೂತನ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ತಿಳಿಸಿದ್ದಾರೆ.
ಕೆಎಸ್ಆರ್ಟಿಸಿ ಕೇಂದ್ರ ಕಚೇರಿಯಲ್ಲಿ ನಾಲ್ಕೂ ಸಾರಿಗೆ ನಿಗಮಗಳ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಪ್ರಥಮ ಬಾರಿಗೆ ಸಭೆ ನಡೆಸಿ ಮಾತನಾಡಿದ ಸಚಿವರು, ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಪ್ರತ್ಯೇಕ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ.
ಮಹಿಳೆಯರಿಗೆ ನೀಡಲಾಗುವ ಶಕ್ತಿ ಸ್ಮಾರ್ಟ್ ಕಾರ್ಡ್‌ಗಳ ಮಾದರಿಯಲ್ಲಿಯೇ ಪುರುಷ ಪ್ರಯಾಣಿಕರಿಗೂ ಅನುಕೂಲವಾಗುವಂತೆ ರೀಚಾರ್ಜ್ ಮಾಡಿಕೊಳ್ಳಲು ಅವಕಾಶವಿರುವ ಸ್ಮಾರ್ಟ್ ಕಾರ್ಡ್‌ಗಳನ್ನು ಪರಿಚಯಿಸಲು ಸಾರಿಗೆ ಇಲಾಖೆ ತೀರ್ಮಾನಿಸಿದೆ ಎಂದು ತಿಳಿಸಿದರು.
3 ಕೋಟಿ ಸಾರ್ವಜನಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆಗೆ ಪ್ಲಾನ್
ಈ ನೂತನ ವ್ಯವಸ್ಥೆಯ ಮೂಲಕ ರಾಜ್ಯದ ಒಟ್ಟು 3 ಕೋಟಿ ಸಾರ್ವಜನಿಕರಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ. ಮಹಿಳೆಯರಿಗೆ ನೀಡುವ ಶಕ್ತಿ ಸ್ಮಾರ್ಟ್ ಕಾರ್ಡ್‌ಗಳನ್ನು ಕೇವಲ ಉಚಿತ ಪ್ರಯಾಣಕ್ಕಾಗಿ ಮಾತ್ರ ಬಳಸಬಹುದಾಗಿದ್ದರೆ, ಪುರುಷ ಪ್ರಯಾಣಿಕರಿಗೆ ವಿತರಿಸಲಾಗುವ ಸ್ಮಾರ್ಟ್ ಕಾರ್ಡ್‌ಗಳಿಗೆ ಹಣವನ್ನು ಭರ್ತಿ ಮಾಡಿಸಿ, ಆ ಮೂಲಕ ಬಸ್ ಟಿಕೆಟ್ ದರವನ್ನು ಪಾವತಿಸುವಂತಹ ಸುಲಭ ಹಾಗೂ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಸಾರ್ವಜನಿಕರಿಗೆ ಇನ್ನಷ್ಟು ಸುಸಜ್ಜಿತ ಹಾಗೂ ಅತ್ಯುತ್ತಮ ಗುಣಮಟ್ಟದ ಸಾರಿಗೆ ಸೇವೆಯನ್ನು ಒದಗಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರದ ಅನುದಾನವನ್ನು ಬಳಸಿಕೊಂಡು 1 ಸಾವಿರ ಸುಸಜ್ಜಿತ ನೂತನ ಬಸ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಇದರ ಜೊತೆಯಲ್ಲಿಯೇ, ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ 4 ಸಾವಿರ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳನ್ನು ಸಹ ಸಾರಿಗೆ ಸೇವೆಗೆ ನಿಯೋಜನೆ ಮಾಡಲಾಗುವುದು.
ಹೊಸದಾಗಿ ಖರೀದಿಸಲಾಗುವ ಈ ಎಲ್ಲಾ ಬಸ್‌ಗಳನ್ನು ಹಂತ ಹಂತವಾಗಿ ನಾಲ್ಕೂ ಸಾರಿಗೆ ನಿಗಮಗಳ ಅಗತ್ಯಕ್ಕೆ ತಕ್ಕಂತೆ ಹಂಚಿಕೆ ಮಾಡಲಾಗುವುದು ಎಂದು ಸಚಿವ ಬೈರತಿ ಸುರೇಶ್ ಅವರು ಹೇಳಿದರು.


