ಶಿವಮೊಗ್ಗ | ನಾಡಿದ್ದು ಮೇ 20ರಂದು ರಾಜ್ಯದಾದ್ಯಂತ ಔಷಧಿ ಅಂಗಡಿಗಳು ಬಂದ್

ಶಿವಮೊಗ್ಗ

ಶಿವಮೊಗ್ಗ, ಜಿಲ್ಲಾ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್‌ನವರು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಕರೆಯಂತೆ ಮೇ 20ರಂದು ಅಂಗಡಿಗಳನ್ನು ಮುಚ್ಚಿ ಒಂದು ದಿನದ ಮುಷ್ಕರವನ್ನು ನಡೆಸಲಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಸ್ ಪಿ ಮಧುಕರ ಮಾತನಾಡಿ,

ಆನ್ಲೈನ್ ನಲ್ಲಿ ನಿಯಂತ್ರಣವಿಲ್ಲದೆ ಔಷಧ ಮಾರಾಟ ನಡೆಯುತ್ತಿದ್ದು ಇದನ್ನು ನಿಲ್ಲಿಸಬೇಕೆಂದು ರಾಜ್ಯ ಸಂಘಟನೆಯು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರೂ ಸಹ ಇಲ್ಲಿಯವರೆಗೂ ಅದನ್ನು ನಿಲ್ಲಿಸಿಲ್ಲ. ಕಟ್ಟುನಿಟ್ಟಿನ ನಿಯಂತ್ರಣ ಮತ್ತು ಜವಾಬ್ದಾರಿಯುತ ವಿತರಣೆ ಅಗತ್ಯವಾಗಿದ್ದು, ನಿಯಂತ್ರಣವಿಲ್ಲದ ಆನ್ಲೈನ್ ಮಾರಾಟದಿಂದ ಸ್ವಯಂ ಔಷಧ ಸೇವನೆ, ಔಷಧಿಗಳ ದುರುಪಯೋಗ,

ನಕಲಿ ಪ್ರಿಸ್ಕ್ರಿಪ್ಷನ್‌ಗಳ ಬಳಕೆ,

ಅಸುರಕ್ಷಿತ ಔಷಧಿಗಳ ವಿತರಣೆ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು. ನಕಲಿ, ಕಳಪೆ ಗುಣಮಟ್ಟದ ಔಷಧಗಳು, ಸರಿಯಾದ ರೀತಿಯಲ್ಲಿ ಸಂಗ್ರಹಿಸದ ಔಷಧಿಗಳು ಸರಬರಾಜು ಸರಪಳಿಗೆ ಪ್ರವೇಶಿಸುವ ಅಪಾಯ ಹೆಚ್ಚಾಗಿದೆ.

ಇದರಿಂದ ರೋಗಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಯುವಕರು ಆನ್ಲೈನ್ ವೇದಿಕೆಗಳ ಮೂಲಕ ಮಾದಕ ಔಷಧಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ.

ತಮ್ಮ ಸಂಘವು ಸಹ ಈ ಬಗ್ಗೆ ಮಾಹಿತಿ ನೀಡಿದೆ. ಈ ಮೂಲಕ ಸೃಷ್ಟಿಸಲಾದ ಅಥವಾ ತಿದ್ದುಪಡಿ ಮಾಡಿದ ಪ್ರಿಸ್ಕ್ರಿಪ್ಶನ್‌ಗಳ ಮೂಲಕ ಇಂತಹ ಔಷಧಗಳನ್ನು ಪಡೆಯಲು ಯತ್ನಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ಇದರ ಜೊತೆಗೆ ಔಷಧಿ ಕಂಪನಿಗಳು ಅತಿಯಾದ ರಿಯಾಯಿತಿ ಪದ್ಧತಿಯನ್ನು ಕೈಬಿಡಬೇಕು ಎನ್ನುವುದು ತಮ್ಮ ಎರಡನೇ ಬೇಡಿಕೆಯಾಗಿದೆ. ಔಷಧಗಳ ಮಾರ್ಜಿನ್ ಅನ್ನು ಶೇಕಡಾ ೧೭ಕ್ಕೆ ನಿಯಂತ್ರಿಸುವ ಎನ್‌ಪಿಪಿಎ ಇದ್ದಾಗ ಕಡಿಮೆ ದರದಲ್ಲಿ ಔಷಧಗಳನ್ನು ಹೇಗೆ ಮಾಡಲಾಗುತ್ತಿದೆ.

ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದಲ್ಲಿ ನಕಲಿ ಔಷಧಗಳು ಆನ್ಲೈನ್ ಮಾರಾಟದಲ್ಲಿ ಹೆಚ್ಚುವ ಸಾಧ್ಯತೆ ಇದೆ ಎಂದರು. ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಲ್ಲಿ ಬೇರೆ ಔಷಧಿಗಳನ್ನು ಮಾರಾಟ ಮಾಡುವ ಮೂಲಕ ಔಷದ ಉದ್ಯಮಗಳ ರಿಟೇಲ್ ಮತ್ತು ಹೋಲ್ಸೇಲ್ ಕ್ಷೇತ್ರಗಳಿಗೆ ಬಂಡವಾಳಶಾಹಿಗಳು ನುಗ್ಗುತ್ತಿದ್ದಾರೆ.

ದೇಶದ ಸುಮಾರು 12 ಲಕ್ಷ ಔಷಧಿ ವ್ಯಾಪಾರಸ್ಥರು ಈ ಉದ್ಯಮದ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅವಲಂಬಿತವಾಗಿದ್ದಾರೆ. ಇದು ಜೀವನ ಮತ್ತು ಭವಿಷ್ಯವಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಔಷಧಿ ಅಂಗಡಿಗಳನ್ನು ಒಂದು ದಿನದ ಮಟ್ಟಿಗೆ ಬಂದ್ ಮಾಡುವುದರ ಮೂಲಕ ತಮ್ಮ ಬೇಡಿಕೆ ಈಡೇರಿಕೆಗೆ ಕೇಂದ್ರ ಸರ್ಕಾರದ ಗಮನವನ್ನು ಸೆಳೆಯುತ್ತಿರುವುದಾಗಿ ಅವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಈ ಜಿ ವೆಂಕಟೇಶ, ಜಂಟಿ ಕಾರ್ಯದರ್ಶಿ ಎಂ ಎಲ್ ಮಂಜುನಾಥ, ಖಜಾಂಚಿ ಕೆ ಸಿ ನಾಗರಾಜ, ಪದಾಧಿಕಾರಿಗಳಾದ ವಿವೇಕಾನಂದ ನಾಯಕ, ರಮೇಶ್, ಪ್ರಕಾಶ್, ಚಂದ್ರಶೇಖರ್. ಖಯ್ಯೂಮ್ ಮೊದಲಾದವರು ಉಪಸ್ಥಿತರಿದ್ದರು.

Author