ಭದ್ರಾವತಿ,ಯಾರೋ ಅಪರಿಚಿತ ವ್ಯಕ್ತಿಗಳು ಏಕಾಏಕಿ ಮನೆಗೆ ನುಗ್ಗಿ ಕಾಂಪೌಂಡ್ ಒಳಗೆ ವಿಷಪೂರಿತ ಹಾವನ್ನು ಮನೆಯೊಳಗೆ ಬಿಟ್ಟು ಪರಾರಿಯಾಗಿರುವ ವಿಚಿತ್ರ ಹಾಗೂ ಭಯಾನಕ ಘಟನೆ ಭದ್ರಾವತಿಯ ಪಿತಾರಿ ನಂಜಪ್ಪ ರಸ್ತೆಯಲ್ಲಿ ಸಂಭವಿಸಿದೆ.ಘಟನೆ ನಡೆದ ಸಮಯದಲ್ಲಿ ಯುವತಿಯೊಬ್ಬರು ಮನೆಯಲ್ಲಿ ಒಬ್ಬರೇ ಇದ್ದರು. ಆಕೆಯ ತಾಯಿ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳಿದ್ದರು.
ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಯುವಕರು ಯುವತಿಯ ಮನೆಯ ಬಳಿ ಬಂದಿದ್ದಾರೆ. ಬಂದು ಸುಮ್ಮನೆ ಹೋಗಿದ್ದರೆ ಯಾವುದೇ ತೊಂದರೆ ಇರುತ್ತಿರಲಿಲ್ಲ. ಆದರೆ, ಆ ಇಬ್ಬರು ವ್ಯಕ್ತಿಗಳು ಏಕಾಏಕಿ ಮನೆಯ ಕಾಂಪೌಂಡ್ ಒಳಗಡೆ ನುಗ್ಗಿದ್ದಾರೆ.ಮನೆಯ ಒಳಗಿನಿಂದಲೇ ಈ ಎಲ್ಲ ಚಟುವಟಿಕೆಗಳನ್ನು ಯುವತಿ ಭಯದಿಂದ ಗಮನಿಸುತ್ತಿದ್ದಳು.
ಈ ಸಂದರ್ಭದಲ್ಲಿ ಆ ಯುವಕರು ತಮ್ಮ ಬಳಿಯಿದ್ದ ಚೀಲವನ್ನು ತೆರೆದು, ಅದರಲ್ಲಿದ್ದ ವಿಷಪೂರಿತ ಹಾವೊಂದನ್ನು ಕಾಂಪೌಂಡ್ ಒಳಗಡೆ ಬಿಟ್ಟಿದ್ದಾರೆ. ಇದನ್ನು ನೋಡಿ ಗಾಬರಿಗೊಂಡ ಯುವತಿ ಜೋರಾಗಿ ಕಿರುಚಿಕೊಂಡಿದ್ದಾರೆ. ಯುವತಿ ಕಿರುಚಿಕೊಳ್ಳುತ್ತಿದ್ದಂತೆ ಹೆದರಿದ ದುಷ್ಕರ್ಮಿಗಳು ತಕ್ಷಣವೇ ಬೈಕ್ ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳ ಈ ಕೃತ್ಯದ ಸಂಪೂರ್ಣ ದೃಶ್ಯಾವಳಿಗಳು ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


