ಭದ್ರಾವತಿ | ಮನೆಯ ಕಾಂಪೌಂಡಿನಲ್ಲಿ ವಿಷಪೂರಿತ ಹಾವು ಬಿಟ್ಟು ಪರಾರಿಯಾದ ದುಷ್ಟರು

ಕ್ರೈಂ

ಭದ್ರಾವತಿ,ಯಾರೋ ಅಪರಿಚಿತ ವ್ಯಕ್ತಿಗಳು ಏಕಾಏಕಿ ಮನೆಗೆ ನುಗ್ಗಿ ಕಾಂಪೌಂಡ್​​ ಒಳಗೆ ವಿಷಪೂರಿತ ಹಾವನ್ನು ಮನೆಯೊಳಗೆ ಬಿಟ್ಟು ಪರಾರಿಯಾಗಿರುವ ವಿಚಿತ್ರ ಹಾಗೂ ಭಯಾನಕ ಘಟನೆ ಭದ್ರಾವತಿಯ ಪಿತಾರಿ ನಂಜಪ್ಪ ರಸ್ತೆಯಲ್ಲಿ ಸಂಭವಿಸಿದೆ.ಘಟನೆ ನಡೆದ ಸಮಯದಲ್ಲಿ ಯುವತಿಯೊಬ್ಬರು ಮನೆಯಲ್ಲಿ ಒಬ್ಬರೇ ಇದ್ದರು. ಆಕೆಯ ತಾಯಿ ಗಾರ್ಮೆಂಟ್ಸ್​​ ಕೆಲಸಕ್ಕೆ ತೆರಳಿದ್ದರು.

ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಯುವತಿಯ ಮನೆಯ ಬಳಿ ಬಂದಿದ್ದಾರೆ. ಬಂದು ಸುಮ್ಮನೆ ಹೋಗಿದ್ದರೆ ಯಾವುದೇ ತೊಂದರೆ ಇರುತ್ತಿರಲಿಲ್ಲ. ಆದರೆ, ಆ ಇಬ್ಬರು ವ್ಯಕ್ತಿಗಳು ಏಕಾಏಕಿ ಮನೆಯ ಕಾಂಪೌಂಡ್ ಒಳಗಡೆ ನುಗ್ಗಿದ್ದಾರೆ.ಮನೆಯ ಒಳಗಿನಿಂದಲೇ ಈ ಎಲ್ಲ ಚಟುವಟಿಕೆಗಳನ್ನು ಯುವತಿ ಭಯದಿಂದ ಗಮನಿಸುತ್ತಿದ್ದಳು.

ಈ ಸಂದರ್ಭದಲ್ಲಿ ಆ ಯುವಕರು ತಮ್ಮ ಬಳಿಯಿದ್ದ ಚೀಲವನ್ನು ತೆರೆದು, ಅದರಲ್ಲಿದ್ದ ವಿಷಪೂರಿತ ಹಾವೊಂದನ್ನು ಕಾಂಪೌಂಡ್​ ಒಳಗಡೆ ಬಿಟ್ಟಿದ್ದಾರೆ. ಇದನ್ನು ನೋಡಿ ಗಾಬರಿಗೊಂಡ ಯುವತಿ ಜೋರಾಗಿ ಕಿರುಚಿಕೊಂಡಿದ್ದಾರೆ. ಯುವತಿ ಕಿರುಚಿಕೊಳ್ಳುತ್ತಿದ್ದಂತೆ ಹೆದರಿದ ದುಷ್ಕರ್ಮಿಗಳು ತಕ್ಷಣವೇ ಬೈಕ್ ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ.

ದುಷ್ಕರ್ಮಿಗಳ ಈ ಕೃತ್ಯದ ಸಂಪೂರ್ಣ ದೃಶ್ಯಾವಳಿಗಳು ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಭದ್ರಾವತಿ ನ್ಯೂಟೌನ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Author