ಶಿವಮೊಗ್ಗ,ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಶಿವಮೊಗ್ಗ ಭದ್ರಾವತಿ ಇಂಡಸ್ಟ್ರೀಸ್ ಅಸೋಸಿಯೇಷನ್ (SBIA) ವತಿಯಿಂದ ಆಯೋಜಿಸಲಾದ ಸಂವಾದದಲ್ಲಿ ಕೈಗಾರಿಕೋದ್ಯಮಿಗಳು, MSME ಪ್ರತಿನಿಧಿಗಳು, ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳ ಪಾಲುದಾರರೊಂದಿಗೆ ಸುದೀರ್ಘ ಮತ್ತು ರಚನಾತ್ಮಕ ಚರ್ಚೆಯನ್ನು ಮಾನ್ಯ ಸಂಸದರಾದ ಬಿ. ವೈ.ರಾಘವೇಂದ್ರ ಅವರು ಕೈಗೊಂಡರು.

ಈ ಸಂದರ್ಭದಲ್ಲಿ ಕೈಗಾರಿಕೆಗಳು ಎದುರಿಸುತ್ತಿರುವ ಸವಾಲುಗಳು, ಕೌಶಲ್ಯಯುತ ಮಾನವ ಸಂಪನ್ಮೂಲದ ಲಭ್ಯತೆ, ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಅಭಿವೃದ್ಧಿ, Ease of Doing Business, MSME ಬೆಳವಣಿಗೆ ಹಾಗೂ ಕೈಗಾರಿಕಾ ವಲಯದ ಮುಂದಿನ ಅಗತ್ಯಗಳ ಕುರಿತು ಅಮೂಲ್ಯ ಸಲಹೆಗಳು ಮತ್ತು ಅಭಿಪ್ರಾಯಗಳನ್ನು ಆಲಿಸಲಾಯಿತು.
ಉದ್ಯಮಿಗಳಿಂದ ಬಂದ ಹಲವು ಮಹತ್ವದ ಸೂಚನೆಗಳನ್ನು ಗಮನಕ್ಕೆ ತೆಗೆದುಕೊಂಡಿದ್ದು, ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು Ease of Doing Business, Make in India, Startup India, PM Vishwakarma, Production Linked Incentive (PLI) ಸೇರಿದಂತೆ ಹಲವು ಉದ್ಯಮ ಸ್ನೇಹಿ ಸುಧಾರಣೆಗಳ ಮೂಲಕ ದೇಶದ ಕೈಗಾರಿಕಾ ಪರಿಸರವನ್ನು ಬಲಪಡಿಸಿದೆ ಎಂದರು.

ಈ ಪರಿವರ್ತನೆಯ ಫಲವಾಗಿ MSME ವಲಯವು ದೇಶದ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ.
ಶಿವಮೊಗ್ಗ ಮತ್ತು ಮಲೆನಾಡು ಭಾಗದ ಕೈಗಾರಿಕಾ ಬೆಳವಣಿಗೆಯನ್ನು ಮತ್ತಷ್ಟು ಉತ್ತೇಜಿಸಲು ಕೈಗಾರಿಕೋದ್ಯಮಿಗಳು, ಕಾರ್ಮಿಕರು ಹಾಗೂ ಎಲ್ಲಾ ಪಾಲುದಾರರೊಂದಿಗೆ ನಿರಂತರ ಸಂವಾದ ಮತ್ತು ಸಹಕಾರ ಮುಂದುವರಿಯಲಿದೆ ಎಂದು ಸಂಸದರು ತಿಳಿಸಿದರು.


