ಶಿವಮೊಗ್ಗ ನಗರದ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಒಂದು ವಿನೂತನ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ಶಿವಮೊಗ್ಗ ಕೇಂದ್ರ ಕಾರಾಗೃಹದ ಬಂಧಿಗಳೇ ರಚಿಸಿ, ಬಂಧಿಗಳೇ ಹಾಡಿರುವ ಸ್ವಚ್ಛತಾ ಜಾಗೃತಿ ಗೀತೆಗಳನ್ನು ಶಿವಮೊಗ್ಗ ಮಹಾನಗರ ಪಾಲಿಕೆಯ ಕಸ ಸಂಗ್ರಹಣಾ ವಾಹನಗಳಲ್ಲಿ ಅಳವಡಿಸಲಾಗಿದ್ದು,
ಇಂದಿನಿಂದ ನಗರದ ಬೀದಿ ಬೀದಿಗಳಲ್ಲಿ ಈ ಹಾಡುಗಳು ಮೊಳಗಲಿವೆ.ಸಮಾಜಮುಖಿ ಚಿಂತನೆಗಳೊಂದಿಗೆ ಸ್ವಚ್ಛತೆ, ಕಸ ವಿಂಗಡಣೆ, ಪರಿಸರ ಸಂರಕ್ಷಣೆ ಹಾಗೂ ನಾಗರಿಕರ ಜವಾಬ್ದಾರಿಯನ್ನು ಸಾರುವ ಹಾಡುಗಳನ್ನು ಬಂಧಿಗಳು ರಚಿಸಿ ತಮ್ಮದೇ ಧ್ವನಿಯಲ್ಲಿ ಹಾಡಿದ್ದಾರೆ.
ಈ ಮೂಲಕ ಕಾರಾಗೃಹದೊಳಗಿನ ಪ್ರತಿಭೆಗಳಿಗೆ ಹೊಸ ವೇದಿಕೆ ದೊರೆತಿದ್ದು, ಸಮಾಜಕ್ಕೂ ಸಕಾರಾತ್ಮಕ ಸಂದೇಶ ರವಾನೆಯಾಗುತ್ತಿದೆ.ಈ ಕುರಿತು ಮಾತನಾಡಿದ ಶಿವಮೊಗ್ಗ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಡಾ. ಶ್ರೀ ರಂಗನಾಥ್, “ಅಪರಾಧವನ್ನು ದ್ವೇಷಿಸಬೇಕು, ಅಪರಾಧಿಯನ್ನಲ್ಲ ಎಂಬ ತತ್ವದಡಿ ಬಂಧಿಗಳ ಮನಃಪರಿವರ್ತನೆಗಾಗಿ ವಿವಿಧ ಸೃಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಸಂಗೀತ ಮತ್ತು ಸಾಹಿತ್ಯವು ವ್ಯಕ್ತಿತ್ವ ಪರಿವರ್ತನೆಗೆ ಪರಿಣಾಮಕಾರಿ ಮಾಧ್ಯಮಗಳಾಗಿವೆ. ಬಂಧಿಗಳಲ್ಲಿರುವ ಪ್ರತಿಭೆಯನ್ನು ಸಮಾಜದ ಒಳಿತಿಗಾಗಿ ಬಳಸುವ ಉದ್ದೇಶದಿಂದ ಈ ಸ್ವಚ್ಛತಾ ಜಾಗೃತಿ ಗೀತೆಗಳನ್ನು ಸಿದ್ಧಪಡಿಸಲಾಗಿದೆ.
ನಗರದ ಜನರು ಈ ಹಾಡುಗಳ ಸಂದೇಶವನ್ನು ಅಳವಡಿಸಿಕೊಂಡು ಸ್ವಚ್ಛ ಶಿವಮೊಗ್ಗ ನಿರ್ಮಾಣಕ್ಕೆ ಕೈಜೋಡಿಸಬೇಕು” ಎಂದು ಹೇಳಿದರು.ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ಕೇಂದ್ರ ಕಾರಾಗೃಹದ ಸಹಯೋಗದಲ್ಲಿ ಜಾರಿಗೊಂಡಿರುವ ಈ ಯೋಜನೆ, ಕೇವಲ ಸ್ವಚ್ಛತಾ ಅಭಿಯಾನವಷ್ಟೇ ಅಲ್ಲದೆ, ಬಂಧಿಗಳ ಪುನರ್ವಸತಿ ಮತ್ತು ಸಮಾಜದೊಂದಿಗೆ ಅವರ ಸಕಾರಾತ್ಮಕ ಸಂಪರ್ಕವನ್ನು ಬೆಳೆಸುವ ಪ್ರಯತ್ನವೂ ಆಗಿದೆ.
ಇಂದಿನಿಂದ ಕಸ ಸಂಗ್ರಹಣಾ ವಾಹನಗಳ ಮೂಲಕ ನಗರದ ಮೂಲೆಮೂಲೆಗಳಲ್ಲಿ ಮೊಳಗಲಿರುವ ಈ ಗೀತೆಗಳು, ಸ್ವಚ್ಛತೆಯ ಸಂದೇಶದ ಜೊತೆಗೆ ಕಾರಾಗೃಹದೊಳಗಿನ ಪ್ರತಿಭೆಗಳ ಹೊಸ ಮುಖವನ್ನು ಸಾರ್ವಜನಿಕರ ಮುಂದೆ ಅನಾವರಣಗೊಳಿಸಲಿವೆ.

ಕಾರಾಗೃಹ ಸಜಾ ಬಂದಿಗಳಿಂದ ಸ್ವಚ್ಛತಾ ಜಾಗೃತಿ ಗೀತೆಗಳ ಧ್ವನಿಮುದ್ರಿಕೆ ಬಿಡುಗಡೆ :
ಶಿವಮೊಗ್ಗ, ಮಹಾನಗರ ಪಾಲಿಕೆ ವ್ಯಾಪ್ತಿಯ ಮನೆ ಮನೆಗೆ ತೆರಳಿ ಕಸ ತುಂಬುವ ವಾಹನಗಳಲ್ಲಿ ಸಾರ್ವಜನಿಕರಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ವಚ್ಛತಾ ಜಾಗೃತಿ ಗೀತೆಗಳನ್ನು ಶಿವಮೊಗ್ಗ ಕೇಂದ್ರ ಕಾರಾಗೃಹದ ಸಜಾ ಬಂದಿಯಾದ ಚಂದ್ರ ಹೆಮ್ಮಾಡಿ ಇವರು 06 ಗೀತೆಗಳ ಸಾಹಿತ್ಯ ಸಂಯೋಜಿಸಿದ್ದು, 06 ಜನ ಬಂದಿಗಳು 06 ವಿಶಿಷ್ಟ ಸ್ವಚ್ಛತಾ ಗೀತೆಗಳ ಗಾಯನದ ಧ್ವನಿಮುದ್ರಿಕೆಯನ್ನು ಸಿದ್ಧಪಡಿಸಿ ಮುದ್ರಿಸಿರುತ್ತಾರೆ.
ಚಂದ್ರ ಹೆಮ್ಮಾಡಿಯವರಿಂದ ಕಸ ಎಸಿಯೋರು ಯಾರವೋ, ದಾದಾಪೀರ್‌ಯವರಿಂದ ಸ್ವಚ್ಛತೆಯೇ ಸೇವೆಯು ಎಂದ ಗಾಂಧಿ ತಾತನ, ತಿಮ್ಮಪ್ಪನವರಿಂದ ಕಸದ ಗಾಡಿ ಬಂತು ನೋಡಿ, ತಿಪ್ಪೇಸ್ವಾಮಿಯವರಿಂದ ಬನ್ನೀರಣ್ಣಾ ಬನ್ನೀರಕ್ಕಾ, ಆನಂದನವರಿAದ ಹಸಿಯಾಗಲಿ ಒಣ ಕಸವಾಗಲೀ, ಅನಿಲ್ ಕುಮಾರ್‌ನರಿಂದ ಕೇಳೋ ತಮ್ಮ ಕೇಳೋ ಅಣ್ಣಾ ಎಂಬ ಈ 6 ಸ್ವಚ್ಛತಾ ಜಾಗೃತಿ ಗೀತೆಗಳನ್ನು ಹಾಡಿದ್ದು, ಈ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆಯ ಮಹತ್ವದ ಕುರಿತು ಅರಿವು ಮತ್ತು ಜಾಗೃತಿ ಮೂಡಿಬರುವ ಸದಾಶಯವನ್ನು ಹೊಂದಲಾಗಿದೆ. ಈ ಹಾಡುಗಳಲ್ಲಿ ಸ್ವಚ್ಛತೆ ಕಾಪಾಡುವುದು, ಸಮರ್ಪಕ ವಿಧಾನದಲ್ಲಿ ಕಸ ವಿಲೇವಾರಿ ಮಾಡುವುದು, ಹಸಿಕಸ ಮತ್ತು ಒಣಕಸ ಬೇರ್ಪಡಿಸುವಿಕೆ, “ಕಸದಿಂದ ರಸ” ಮಾದರಿಯಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿ, ಬಯೋಗ್ಯಾಸ್ ಉತ್ಪಾದನ ಮೂಲಕ ಉದ್ಯೋಗ ಮತ್ತು ಆದಾಯವನ್ನು ಸಂಪಾದಿಸುವುದು. ಆರೋಗ್ಯ ರಕ್ಷಣೆ ಮತ್ತು ಪರಿಸರ ನೈರ್ಮಲ್ಯದ ಅರಿವು ಮೂಡಿಸುವುದು ಸೇರಿದಂತೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸ್ವಚ್ಛತೆಯೇ ಮೂಲ ತಳಹದಿ ಎಂಬ ಸಂದೇಶಗಳನ್ನು ಅಳವಡಿಸಲಾಗಿರುತ್ತದೆ.
ಈ ಬಂದಿಗಳ ಹಾಡುಗಳು ಜೂ.11 ರಿಂದ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ತುಂಬುವ ವಾಹನಗಳಲ್ಲಿ ಬಿತ್ತರಗೊಳ್ಳುತ್ತಿವೆ. ಬಂದಿಗಳ ಮನಃಪರಿವರ್ತನ ಮತ್ತು ಸುಧಾರಣಾ ಕಾರ್ಯಕ್ರಮಗಳಲ್ಲಿ ಈ ರೀತಿಯ ವಿಭಿನ್ನ ಹಾಗೂ ವಿನೂತನ ಕಾರ್ಯಕ್ರಮ ನಮ್ಮ ರಾಜ್ಯದಲ್ಲಿ ಪ್ರಪ್ರಥಮವಾಗಿದೆ ಎಂದು ಕಾರಾಗೃಹ ಮುಖ್ಯ ಅಧೀಕ್ಷಕರು ಪ್ರಕಟಣೆಲ್ಲಿ ತಿಳಿಸಿದ್ದಾರೆ.


