ದಾವಣಗೆರೆ | ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ವಿಡಿಯೋ ವೈರಲ್ ; 10 ಜನರು ವಶಕ್ಕೆ

ದಾವಣಗೆರೆ

ದಾವಣಗೆರೆ, ಚನ್ನಗಿರಿ ತಾಲೂಕಿನ ಯಲೋದಹಳ್ಳಿಯಲ್ಲಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಸಂತ್ರಸ್ತ ಮಹಿಳೆಯ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವಾಪಟ್ಟಣ ಪೊಲೀಸರು 10 ಜನರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಜೂ.3 ರಂದು 41 ವರ್ಷದ ಮಹಿಳೆಯೊಬ್ಬರನ್ನು ಗ್ಯಾಂಗ್‌ರೇಪ್‌ ನಡೆಸಿದ್ದಾರೆ ಎನ್ನಲಾಗಿದೆ.ಮಹಿಳೆ ವಾಹನದಿಂದ ಇಳಿದು ಹೋಗುತ್ತಿರುವುದು ಒಳಗೊಂಡಂತೆ ಕೆಲವೊಂದನ್ನು ವಿಡಿಯೋ ಮಾಡಿಕೊಂಡಿದ್ದ ಆರೋಪಿಗಳು ತದನಂತರದಲ್ಲಿ ಮಹಿಳೆಗೆ ಬ್ಲಾಕ್‌ಮೇಲ್ ಮಾಡಲಾರಂಭಿಸಿದ್ದರು.

ಮಹಿಳೆ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಕೆಲ ದಿನಗಳ ಬಳಿಕ ಅಶ್ಲೀಲ ಫೋಟೋ ಮತ್ತು ವಿಡಿಯೋಗಳು ಮೊಬೈಲ್‌ಗಳಲ್ಲಿ ಹರಿದಾಡುತ್ತಿರುವ ವಿಚಾರ ಗೊತ್ತಾದ ನಂತರ ದೂರು ಸಲ್ಲಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬಸವಾಪಟ್ಟಣ ಪೊಲೀಸರು ಇಸ್ತ್ರಿ ನಾಗರಾಜ್, ನಾಗರಾಜ್, ಅರ್ಜುನ್, ಬಸವಂತ, ಕುಂದೂರು ಮಾರುತಿ, ಹೆಗ್ಗ ಮಾರುತಿ, ಮನು, ಜೋಗಿ ಸುನೀಲ್, ಪ್ರದೀಪ್, ಮಧು ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಮಹಿಳೆ ನೀಡಿದ ದೂರಿನ ಮೇರೆಗೆ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 88/2026 ದಾಖಲಿಸಲಾಗಿದೆ.

ಮಂಗಳವಾರ ಜಿಲ್ಲಾ ರಕ್ಷಣಾಧಿಕಾರಿ ಎಚ್.ಟಿ. ಶೇಖ‌ರ್ ಬಸವಾಪಟ್ಟಣ ಠಾಣೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಆರೋಪಿತರು ಹಾಗೂ ಸಂತ್ರಸ್ತೆಯನ್ನು ಚನ್ನಗಿರಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಸಂಪೂರ್ಣ ತನಿಖೆ ನಂತರವೇ ಇಡೀ ಪ್ರಕರಣದ ಬಗ್ಗೆ ಸ್ಪಷ್ಟತೆ ದೊರೆಯಲಿದೆ.

Author