ತೀರ್ಥಹಳ್ಳಿ | ಕುಡಿಯುವ ನೀರಿನ ಮೋಟರ್​ ಕಳ್ಳತನ

ಶಿವಮೊಗ್ಗ

ತೀರ್ಥಹಳ್ಳಿ, ಸಾರ್ವಜನಿಕ ಕುಡಿಯುವ ನೀರಿನ ಬಾವಿಗೆ ಅಳವಡಿಸಲಾಗಿದ್ದ ಎರಡು ಮೋಟಾರ್ ಪಂಪ್‌ಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿರುವ ಘಟನೆ ತಾಲೂಕಿನ ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಲೇದುರ್ಗದಲ್ಲಿ ನಡೆದಿದೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕವಲೇದುರ್ಗದ ತಿಮ್ಮಣ್ಣ ನಾಯ್ಕನ ಕೆರೆಯ ಬಳಿ ಇರುವ ಸಾರ್ವಜನಿಕ ಕುಡಿಯುವ ನೀರಿನ ಬಾವಿಗೆ ಸಾರ್ವಜನಿಕರ ಬಳಕೆಗಾಗಿ 7.5 ಹೆಚ್.ಪಿ ಮತ್ತು 5 ಹೆಚ್.ಪಿ ಸಾಮರ್ಥ್ಯದ ಎರಡು ಮೋಟಾರ್ ಪಂಪ್‌ಗಳನ್ನು ಅಳವಡಿಸಲಾಗಿತ್ತು.

ಮೇ 15 ರನ ರಾತ್ರಿ ಸುಮಾರು 11-00 ಗಂಟೆಯ ಸಮಯದಲ್ಲಿ ಗ್ರಾಮ ಪಂಚಾಯಿತಿಯ ನೀರುಗಂಟೆ ಮೋಟಾರ್‌ಗಳ ಸ್ವಿಚ್ ಆಫ್ ಮಾಡಿದ್ದರು. ಆ ಸಮಯದಲ್ಲಿ ಮೋಟಾರ್ ಪಂಪ್‌ಗಳು ಬಾವಿಯಲ್ಲೇ ಇದ್ದವು ಆದರೆ, ಮರುದಿನ ಮುಂಜಾನೆ 06-00 ಗಂಟೆಗೆ ನೀರುಗಂಟೆ ಮೋಟಾರ್‌ಗಳನ್ನು ಚಾಲೂ ಮಾಡಲು (ಸ್ವಿಚ್ ಆನ್) ಹೋದಾಗ, ಬಾವಿಗೆ ಅಳವಡಿಸಲಾಗಿದ್ದ ಆ ಎರಡೂ ಮೋಟಾರ್ ಪಂಪ್‌ಗಳು ನಾಪತ್ತೆಯಾಗಿರುವುದು ಕಂಡುಬಂದಿದೆ.

ಯಾರೋ ಅಪರಿಚಿತ ಕಳ್ಳರು ರಾತ್ರೋರಾತ್ರಿ ಬಾವಿಗೆ ಇಳಿದು ಮೋಟಾರ್‌ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಖಾತ್ರಿಯಾದ ತಕ್ಷಣ, ನೀರುಗಂಟೆಯು ಈ ವಿಷಯವನ್ನು ಪಿ,ಡಿ,ಒ ಅವರಿಗೆ ತಿಳಿಸಿದ್ದಾರೆ.

ಕಳ್ಳತನವಾಗಿರುವ ಎರಡು ಮೋಟಾರ್‌ಗಳ ಒಟ್ಟು ಅಂದಾಜು ಮಾರುಕಟ್ಟೆ ಬೆಲೆ ಸುಮಾರು 70,000 ರೂಪಾಯಿಗಳಾಗಬಹುದು ಎಂದು ಅಂದಾಜಿಸಲಾಗಿದೆ.

ಮೋಟರ್​​ನ್ನು ಕಳ್ಳತನ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ, ಕಾನೂನು ರೀತ್ಯ ಕಠಿಣ ಕ್ರಮ ಕೈಗೊಳ್ಳಬೇಕೆಂದು pdo ತೀರ್ಥಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Author