ಶಿವಮೊಗ್ಗಕ್ಕೆ ನೀಡಬೇಕಿದ್ದ ಹೈಕೋರ್ಟ್ ಪೀಠ ಮಂಗಳೂರಿಗೆ? ; ತೀವ್ರಗೊಂಡ ಹೋರಾಟ

ಶಿವಮೊಗ್ಗ

ಹೈಕೋರ್ಟ್ ಪೀಠವನ್ನು ಶಿವಮೊಗ್ಗಕ್ಕೆ ನೀಡುವ ಬದಲು ಮಂಗಳೂರಿಗೆ ಸ್ಥಳಾಂತರಿಸಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಶಿವಮೊಗ್ಗ ಜಿಲ್ಲೆಯ ನ್ಯಾಯವಾದಿಗಳು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೂ ತೀವ್ರ ಸ್ವರೂಪ ಪಡೆದುಕೊಂಡಿದೆ.

ಮಲೆನಾಡು ಭಾಗದ ಜನರ ಅನುಕೂಲತೆ ಹಾಗೂ ನ್ಯಾಯಾಂಗ ಸೇವೆಯ ಸುಲಭ ಲಭ್ಯತೆ ದೃಷ್ಟಿಯಿಂದ ಹೈಕೋರ್ಟ್ ಪೀಠ ಶಿವಮೊಗ್ಗದಲ್ಲೇ ಸ್ಥಾಪನೆಯಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ರೈತ ನಾಯಕ ಬಸವರಾಜ್, ಡಿಎಸ್ಎಸ್ ಮುಖಂಡರು, ಶಿವಮೊಗ್ಗ ಜಿಲ್ಲಾ ನಾಗರೀಕರ ಸಂರಕ್ಷಣಾ ವೇದಿಕೆಯ ಒಕ್ಕೂಟದ ವಸಂತ್ ಸೇರಿದಂತೆ ಅನೇಕ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಶಿವಮೊಗ್ಗ ನಗರದ ಶಾಸಕ ಸಿ. ಚೆನ್ನಬಸಪ್ಪ, “ಇದು ಕೇವಲ ನ್ಯಾಯವಾದಿಗಳ ಸಮಸ್ಯೆಯಲ್ಲ. ಇದು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಸಮಸ್ಯೆಯಾಗಿದೆ. ಶಿವಮೊಗ್ಗಕ್ಕೆ ದೊರಕಬೇಕಿದ್ದ ಹೈಕೋರ್ಟ್ ಪೀಠವನ್ನು ಮಂಗಳೂರಿಗೆ ನೀಡಿದರೆ ಮಲೆನಾಡು ಭಾಗದ ಜನರಿಗೆ ನ್ಯಾಯ ಪಡೆಯಲು ದೂರ ಪ್ರಯಾಣ ಮಾಡಬೇಕಾಗುತ್ತದೆ. ಇದರಿಂದ ಸಮಯದ ಜೊತೆಗೆ ಆರ್ಥಿಕ ಹೊರೆ ಕೂಡ ಹೆಚ್ಚಾಗುತ್ತದೆ. ಸಾಮಾನ್ಯ ಜನರು ನ್ಯಾಯಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು,” ಎಂದು ಹೇಳಿದರು.

ಇದೇ ವೇಳೆ ರೈತ ಸಂಘದ ನಾಯಕ ಬಸವರಾಜ್ ಮಾತನಾಡಿ, “ಶಿವಮೊಗ್ಗ ಜಿಲ್ಲೆ ಆಡಳಿತಾತ್ಮಕ ಹಾಗೂ ನ್ಯಾಯಾಂಗದ ದೃಷ್ಟಿಯಿಂದ ಪ್ರಮುಖ ಕೇಂದ್ರವಾಗಿದೆ. ಇಲ್ಲಿನ ಜನರ ಅನುಕೂಲತೆ ಪರಿಗಣಿಸದೇ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ನಾವು ಒಪ್ಪುವುದಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜಿ.ಆರ್. ರಾಘವೇಂದ್ರ ಮಾತನಾಡಿ, “ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಜೂನ್ 1ರಂದು ಮಾನ್ಯ ಮುಖ್ಯಮಂತ್ರಿಗಳು ಶಿವಮೊಗ್ಗ ಭೇಟಿ ನೀಡುವ ಸಂದರ್ಭದಲ್ಲಿ ಮನವಿ ಸಲ್ಲಿಸಿ ಹೈಕೋರ್ಟ್ ಪೀಠವನ್ನು ಶಿವಮೊಗ್ಗದಲ್ಲೇ ಸ್ಥಾಪಿಸುವಂತೆ ಆಗ್ರಹಿಸಲಿದ್ದೇವೆ,” ಎಂದು ತಿಳಿಸಿದರು.

ಪ್ರತಿಭಟನಾಕಾರರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಶಿವಮೊಗ್ಗದಲ್ಲೇ ಹೈಕೋರ್ಟ್ ಪೀಠ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬೇಡಿಕೆ ಈಡೇರದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನು ಸಹ ನೀಡಿದರು.

Author