ಶಿವಮೊಗ್ಗ | ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಉತ್ತರ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

ರಾಜಕೀಯ

ಶಿವಮೊಗ್ಗ, ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಗ್ಯಾಸ್ ದರ ಏರಿಕೆಯನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಇಂದು ಶಿವಮೊಗ್ಗದ ಪ್ರಮುಖ ಶಿವಪ್ಪನಾಯಕ ವೃತ್ತದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ರಸ್ತೆಯಲ್ಲೇ ಕುಳಿತು ಧರಣಿ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಮುಖರಾದ ಎಚ್. ಸಿ. ಯೋಗೇಶ್, ಕೇಂದ್ರ ಸರ್ಕಾರವು ನಿರಂತರವಾಗಿ ಇಂಧನ ದರಗಳನ್ನು ಹೆಚ್ಚಿಸುವ ಮೂಲಕ ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿಯನ್ನು ಮುಟ್ಟಿಸುತ್ತಿದೆ. ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳು ಗಗನಕ್ಕೇರುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿಯವರು ವಿದೇಶ ಪ್ರವಾಸಗಳಲ್ಲೇ ನಿರತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಇತ್ತೀಚಿನ ನೀಟ್ ಪರೀಕ್ಷೆಯ ವಿವಾದವನ್ನು ಪ್ರಸ್ತಾಪಿಸಿದ ಅವರು, ನೀಟ್ ಪರೀಕ್ಷೆ ರದ್ದಾಗಿ ಇಡೀ ದೇಶದ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ದಿಕ್ಕುತೋಚದಂತಾಗಿದೆ. ಇಷ್ಟು ದೊಡ್ಡ ಹಗರಣ ನಡೆದಿದ್ದರೂ ಕೇಂದ್ರ ಶಿಕ್ಷಣ ಸಚಿವರು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ.

ಈ ನಡವಳಿಕೆಯನ್ನು ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇಬ್ಬರೂ ಕೇವಲ ಡಬ್ಬಲ್ ಆಕ್ಟಿಂಗ್’ ಮಾಡುವ ನಟರಂತೆ ಕಾಣಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಒಂದೊಮ್ಮೆ ಇಂತಹ ಘಟನೆ ಅಥವಾ ಲೋಪವೇನಾದರೂ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರದಲ್ಲಿ ನಡೆದಿದ್ದರೆ, ಇಷ್ಟೊತ್ತಿಗೆ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ಯಾಗ್ ಮಾಡಿ ದೊಡ್ಡ ರಂಪಾಟ ಮಾಡುತ್ತಿದ್ದರು. ಆದರೆ ಈಗ ತಮ್ಮದೇ ಸರ್ಕಾರದ ತಪ್ಪಿರುವುದರಿಂದ ಎಲ್ಲರೂ ಮೌನಕ್ಕೆ ಶರಣಾಗಿದ್ದಾರೆ.

ನೀಟ್ ಪರೀಕ್ಷೆ ಬರೆದ 22 ಲಕ್ಷ ಮಕ್ಕಳಲ್ಲಿ ಹಿಂದೂ ಧರ್ಮದ ಮಕ್ಕಳೇ ಹೆಚ್ಚಾಗಿದ್ದಾರೆ. ಬೇರೆಲ್ಲಾ ವಿಚಾರಗಳಲ್ಲಿ ಧರ್ಮದ ಬಗ್ಗೆ ಮಾತನಾಡುವ ಇವರು, ಈಗ ಮಕ್ಕಳ ಭವಿಷ್ಯದ ವಿಷಯದಲ್ಲಿ ಏಕೆ ಸುಮ್ಮನಿದ್ದಾರೆ? ಇವರು ಧರ್ಮವನ್ನು ಕೇವಲ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ ಎಂದು ಯೋಗೇಶ್ ಗಂಭೀರವಾಗಿ ಆರೋಪಿಸಿದರು.

Author