ಶಿವಮೊಗ್ಗ | ಮಧ್ವರ ಜಯಂತಿ ಆಚರಣೆಗೆ ಸರ್ಕಾರದ ಆದೇಶ: ಕೆ. ಬಿ ಪ್ರಸನ್ನ ಕುಮಾರ್ ಹರ್ಷ

ಶಿವಮೊಗ್ಗ

ಶಿವಮೊಗ್ಗ, ಮಧ್ವಾಚಾರ್ಯರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲು ಆದೇಶಿಸಿದ್ದು, ಈ ನಿರ್ಧಾರಕ್ಕಾಗಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗೆ ಮಾಧ್ವ ಮತ್ತು ಬ್ರಾಹ್ಮಣ ಸಮಾಜದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ತಿಳಿಸಿದರು.

ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೩ರಿಂದ ೨೦೧೮ರವರೆಗೆ ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾಗಿದ್ದಾಗ ಬ್ರಾಹ್ಮಣರ ಅಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಸಮುದಾಯದ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದೆ. ೨೦೧೬ ಮತ್ತು ೨೦೧೭ರ ಆಯವ್ಯಯ ಬಜೆಟ್ ಸಭೆಗಳಲ್ಲಿ ಈ ಕುರಿತು ಒತ್ತಾಯಿಸಿದ್ದೆ. ಮಧ್ವಾಚಾರ್ಯರ ತತ್ವಾದರ್ಶಗಳು, ಸಂಸ್ಕಾರ ಮತ್ತು ಸಂಪ್ರದಾಯಗಳು ಮುಂದಿನ ಪೀಳಿಗೆಗೂ ಪರಿಚಯವಾಗಬೇಕು ಎಂಬ ಉದ್ದೇಶದಿಂದ ಮಧ್ವನವಮಿಯನ್ನು ಸರ್ಕಾರದ ವತಿಯಿಂದ ಆಚರಿಸುವಂತೆ ಅಂದಿನ ಸಂದರ್ಭದಲ್ಲಿ ಒತ್ತಾಯಿಸಿದ್ದೆ.

ಶಂಕರಾಚಾರ್ಯರ ಜಯಂತಿಯಂತೆ ಮಧ್ವಾಚಾರ್ಯರು ಹಾಗೂ ರಾಮಾನುಜಾಚಾರ್ಯರ ಜಯಂತಿಗಳನ್ನೂ ಸರ್ಕಾರಿ ಮಟ್ಟದಲ್ಲಿ ಆಚರಿಸಬೇಕು ಎಂಬುದು ತಮ್ಮ ಆಶಯವಾಗಿತ್ತು ಎಂದು ಹೇಳಿದರು.

ಸರ್ಕಾರದ ಇಂತಹ ಕ್ರಮಗಳಿಂದ ಆಚಾರ್ಯರ ಚಿಂತನೆಗಳು ಮತ್ತು ಸಾಂಸ್ಕೃತಿಕ ಪರಂಪರೆ ಹೆಚ್ಚಿನ ಜನರಿಗೆ ತಲುಪಲು ಸಾಧ್ಯವಾಗುತ್ತದೆ. ಮಧ್ವಾಚಾರ್ಯರ ಜಯಂತಿ ಆಚರಣೆಗೆ ಆದೇಶಿಸಿರುವಂತೆಯೇ ರಾಮಾನುಜಾಚಾರ್ಯರ ಜಯಂತಿ ಆಚರಣೆಗೂ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪಂಡಿತ ರಾಯಚೂರು ಕೃಷ್ಣಾಚಾರ್ಯ ಮಾತನಾಡಿ, ಈ ವರ್ಷ ವಿಜಯದಶಮಿ ದಿನ ಮಧ್ವನವಮಿ ಆಚರಿಸಲಾಗುತ್ತಿದೆ.

ಬ್ರಾಹ್ಮಣ ಸಮುದಾಯದಲ್ಲಿ ತಿಥಿಯ ಆಧಾರದ ಮೇಲೆ ಜಯಂತಿ ಆಚರಿಸಲಾಗುತ್ತದೆ. ಮುಂದಿನ ವರ್ಷದಿಂದ ಮಧ್ವಾಚಾರ್ಯರ ಜಯಂತಿಯನ್ನು ಯಾವ ತಿಥಿಯಂದು ಆಚರಿಸಬೇಕು ಎಂಬುದನ್ನು ನಿರ್ಧರಿಸಿ, ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಪ್ರಸನ್ನ ಕುಮಾರ್ ಶಾಸಕರಾಗಿದ್ದಾಗ ಮಾಡಿದ ಮನವಿಯನ್ನು ಸರ್ಕಾರ ಈಗ ಪರಿಗಣಿಸಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಸುರೇಶ್ ನಾಡಿಗ್, ಕೆ.ಎಲ್. ಉಪಾಧ್ಯಾಯ, ರಾಜೀವ್ ಕೃಷ್ಣಾಚಾರ್ಯ, ವಿಜಯೇಂದ್ರ, ಮುರಳೀಧರ್, ಗುರುರಾಜ್, ಮಾಧವ ಮೂರ್ತಿ, ಸ್ವಾಮಿನಾಥ್, ಸುಮಂತ್ ಇದ್ದರು.

Author