ಶಿವಮೊಗ್ಗ | ಸಂಸ್ಕಾರಯುತ ಕುಟುಂಬಕ್ಕೆ ಮಹಿಳೆ ಕಾರಣ : ಎಸಿ ಡಾ|| ಮೈತ್ರಿ

ಶಿವಮೊಗ್ಗ

ಶಿವಮೊಗ್ಗ, ಮಹಿಳೆ ಕುಟುಂಬದ ಶಕ್ತಿಯಾಗಿ ಜೀವನವನ್ನು ನಿರ್ವಹಿಸುತ್ತಿದ್ದಾಳೆ. ಸಂಸ್ಕಾರಯುತ ಕುಟುಂಬವನ್ನು ನಡೆಸುವಲ್ಲಿ ಪರಿಪೂರ್ಣ ಪಾತ್ರವನ್ನು ಅವಳು ವಹಿಸಿದ್ದಾಳೆ. ಮಹಿಳೆಯ ಸಾಧನೆ ಅತ್ಯಮೂಲ್ಯವಾದುದು. ಸಮಾಜದ ಶಕ್ತಿಯಾಗಿ ಸಮರ್ಥ ನಾಯಕರನ್ನು ಸಮಾಜಕ್ಕೆ ನೀಡುವಲ್ಲಿ ಮಹಿಳೆಯ ಕೊಡುಗೆ ಇದೆ ಎಂದುಶಿವಮೊಗ್ಗ ಉಪವಿಭಾಗಾಧಿಕಾರಿ ಡಾ|| ಎಚ್ ಪಿ ಎಸ್ ಮೈತ್ರಿ ಹೇಳಿದರು.

ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ “ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮಸ್ಥಳವು ಸಂಘವು ಮಾದರಿ ಕುಟುಂಬವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು ಧರ್ಮಾಧಿಕಾರಿ ದಂಪತಿಗಳಿಗೆ ಹೃದಯ ಪೂರ್ವಕ ಅಭಿನಂದನೆ ತಿಳಿಸಿದರು.

ಸಂಸ್ಥೆಯ ಚಿತ್ರದುರ್ಗ ಪ್ರಾದೇಶಿಕ ನಿರ್ದೇಶಕಿ ಗೀತಾ ಮಾತನಾಡಿ, ಎಲ್ಲಾ ಕ್ಷೇತ್ರದಲ್ಲಿಯೂ ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು ಮತ್ತು ಒಗ್ಗಟ್ಟಿನಲ್ಲಿ ಇರಬೇಕು, ಮನೆಯಲ್ಲಿ ಸಮಯ ವ್ಯರ್ಥ ಮಾಡದೇ ಕುಟುಂಬಕ್ಕೆ ಸ್ವಲ್ಪ ಸಮಯ ನೀಡಿ ಮನೆಯ ಸದಸ್ಯರೊಂದಿಗೆ ಸಮಯ ಕಳೆಯಬೇಕು. ಎಂದರು.ಡಾ|| ಅಶೋಕ್ ಪೈ ಕಾಲೇಜಿನ ಪ್ರಾಂಶುಪಾಲೆ ಸಂಧ್ಯಾ ಕಾವೇರಿ ಮಾತನಾಡಿ, ಆಧುನಿಕ ಯುಗದಲ್ಲಿ ಒತ್ತಡ ರಹಿತ ಜೀವನ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರದ ಕುರಿತು ಮಾಹಿತಿಯ ಮೂಲಕ ಸಂವಾದ ನಡೆಸಿದರು.

ವ್ಯಕ್ತಿತ್ವ ವಿಕಸನ ತರಬೇತುದಾರರಾದ ಸೌಮ್ಯಾ ಅರಳಪ್ಪ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ವಿವಿಧ ದಾನ್ಯಗಳಿಂದ ತಯಾರಿಸಿದ ಆರತಿ ತಟ್ಟೆ ಪ್ರದರ್ಶನ, ಛದ್ಮವೇಷ ಸ್ಪರ್ಧೆ, ಆಶು ಅಭಿಯಾನ,ನೈಸರ್ಗಿಕ ಪುಷ್ಪ ಗುಚ್ಛ ತಯಾರಿ, ಪೌಷ್ಟಿಕ ಆಹಾರ ತಯಾರಿ, ಜಾನಪದ ನೃತ್ಯ ಸ್ಪರ್ಧೆ, ಕರಕುಶಲ ವಸ್ತು ಪ್ರದರ್ಶನ, ಯಕ್ಷಗಾನ ಪ್ರದರ್ಶನ ನಡೆಯಿತು.800 ಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದರು.

Author