ಶಿವಮೊಗ್ಗ | ಜಿಲ್ಲೆಯ ಪ್ರಮುಖ ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ನೀರು

ಶಿವಮೊಗ್ಗ

ಶಿವಮೊಗ್ಗ, ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಜಿಲ್ಲೆಯ ಪ್ರಮುಖ ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ತುಂಗಾ, ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಒಳಹರಿವು ಗಮನಾರ್ಹವಾಗಿ ಹೆಚ್ಚಿದೆ.

ತುಂಗಾ ಜಲಾಶಯ :

ಇಂದು ಬೆಳಿಗ್ಗೆ ಲಭ್ಯವಾದ ಮಾಹಿತಿಯಂತೆ, ತುಂಗಾ ಜಲಾಶಯದ ಗರಿಷ್ಠ ನೀರಿನ ಮಟ್ಟ (FRL) 588.24 ಮೀಟರ್ ಆಗಿದ್ದು, ಪ್ರಸ್ತುತ ನೀರಿನ ಮಟ್ಟ 587.36 ಮೀಟರ್ ದಾಖಲಾಗಿದೆ. ಜಲಾಶಯದ ಒಟ್ಟು ನೀರಿನ ಸಂಗ್ರಹ 2.755 ಟಿಎಂಸಿ ಇದ್ದು, ಜೀವಂತ ಸಂಗ್ರಹ 1.926 ಟಿಎಂಸಿ ಆಗಿದೆ.ಜಲಾಶಯಕ್ಕೆ ಒಟ್ಟು 84223 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿಯಿಂದಲೇ 82503 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಜಲಾಶಯದಿಂದ ಒಟ್ಟು 72,460 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 588.17 ಮೀಟರ್ ಇದ್ದು, ಒಳಹರಿವು 17,401 ಕ್ಯೂಸೆಕ್ ಹಾಗೂ ಹೊರಹರಿವು 15,215 ಕ್ಯೂಸೆಕ್ ಆಗಿತ್ತು.

ಭದ್ರಾ ಜಲಾಶಯ :

ಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ 2158 ಅಡಿ (186 ಅಡಿ) ಆಗಿದ್ದು, ಇಂದು ಬೆಳಿಗ್ಗೆ 6 ಗಂಟೆಗೆ ಜಲಾಶಯದ ನೀರಿನ ಮಟ್ಟ 2132.25 ಅಡಿ (160 ಅಡಿ 3 ಇಂಚು) ದಾಖಲಾಗಿದೆ. ಜಲಾಶಯದಲ್ಲಿ 43.147 ಟಿಎಂಸಿ ನೀರು ಸಂಗ್ರಹವಾಗಿದೆ.ಜಲಾಶಯಕ್ಕೆ 31,874 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಒಟ್ಟು 185 ಕ್ಯೂಸೆಕ್ ನೀರನ್ನು ಮಾತ್ರ ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 180 ಅಡಿ 5 ಇಂಚು ಇದ್ದು, 64.692 ಟಿಎಂಸಿ ನೀರು ಸಂಗ್ರಹವಾಗಿತ್ತು.

ಲಿಂಗನಮಕ್ಕಿ ಜಲಾಶಯ:

ಲಿಂಗನಮಕ್ಕಿ ಜಲಾಶಯದಲ್ಲಿ ಇಂದು ಬೆಳಿಗ್ಗೆ 8 ಗಂಟೆಗೆ ನೀರಿನ ಮಟ್ಟ 1781.85 ಅಡಿ ದಾಖಲಾಗಿದೆ. ಜಲಾಶಯಕ್ಕೆ 77,580 ಕ್ಯೂಸೆಕ್ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಆದರೆ ಪ್ರಸ್ತುತ 2,066 ಕ್ಯೂಸೆಕ್ ನೀರನ್ನು ಮಾತ್ರ ಸ್ಲೂಯಿಸ್ ಮೂಲಕ ಹೊರಬಿಡಲಾಗುತ್ತಿದೆಜಲಾಶಯದಲ್ಲಿ 57.81 ಟಿಎಂಸಿ ಜೀವಂತ ನೀರಿನ ಸಂಗ್ರಹವಿದ್ದು, ಇದು ಒಟ್ಟು ಸಾಮರ್ಥ್ಯದ 38.13 ಶೇಕಡಾ ಆಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 1811.40 ಅಡಿ ಇದ್ದು, ಜೀವಂತ ನೀರಿನ ಸಂಗ್ರಹ 127.25 ಟಿಎಂಸಿ (83.92%) ದಾಖಲಾಗಿತ್ತು.

ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಜಲಾಶಯಗಳಿಗೆ ಒಳಹರಿವು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದ್ದು, ನದಿ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

Author