ಶಿವಮೊಗ್ಗ | ನಗರ ಹೋಬಳಿ ರೈತರಿಗೆ ಸಮರ್ಪಕ ಬೆಳೆ ವಿಮೆ ದೊರೆಯುವಂತೆ ಮನವಿ ಸಲ್ಲಿಕೆ

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಶ್ರೀ ನೀಲಕಂಠೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ವತಿಯಿಂದ ನಗರ ಹೋಬಳಿ ವ್ಯಾಪ್ತಿಯ ರೈತರ ಸಮಸ್ಯೆಗಳ ಕುರಿತು ತೋಟಗಾರಿಕೆ ಇಲಾಖೆ ಹೊಸನಗರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಲಾಯಿತು.

ನಗರ ಹೋಬಳಿ ವ್ಯಾಪ್ತಿಯು ಮಲೆನಾಡಿನ ಅತೀ ಹೆಚ್ಚು ಮಳೆಯಾಗುವ ಪ್ರದೇಶವಾಗಿದ್ದು, ಇಲ್ಲಿನ ರೈತರು ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನೇ ಅವಲಂಬಿಸಿದ್ದಾರೆ. ಪ್ರತಿ ವರ್ಷದಂತೆ ರೈತರು ಬೆಳೆ ವಿಮೆ ಪಾವತಿಸುತ್ತಿದ್ದು, ಕಳೆದ ವರ್ಷ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಮಳೆ ಮಾಪನ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ, ವಾಸ್ತವಿಕ ಮಳೆಯ ಪ್ರಮಾಣ ದಾಖಲಾಗದೆ ಕೆಲವು ರೈತರಿಗೆ ಬೆಳೆ ವಿಮೆ ಪರಿಹಾರ ಸಮರ್ಪಕವಾಗಿ ದೊರೆಯಲಿಲ್ಲ.

ಈ ಹಿನ್ನೆಲೆಯಲ್ಲಿ ನಗರ ಹೋಬಳಿ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿಗಳ ಮಳೆ ಮಾಪನ ಕೇಂದ್ರಗಳನ್ನು ಪರಿಶೀಲಿಸಿ, ಸರಿಪಡಿಸಿ, ಮುಂದಿನ ದಿನಗಳಲ್ಲಿ ನೈಜ ಮಳೆಯ ಪ್ರಮಾಣದ ಆಧಾರದ ಮೇಲೆ ರೈತರಿಗೆ ಸರಿಯಾದ ಬೆಳೆ ವಿಮೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಯಿತು.

ಈ ಸಂದರ್ಭದಲ್ಲಿ ನಗರ ಶ್ರೀ ನೀಲಕಂಠೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಇದರ ಅಧ್ಯಕ್ಷರಾದ ಸಾಧಗಲ್ ಅಂಬರೀಷ್ ಉಪಾಧ್ಯಕ್ಷರಾದ ಗೋಪಾಲ್ ಶೆಟ್ಟಿ.ನಿರ್ದೇಶಕರುಗಳಾದ ಗುರುರಾಜ್ ಭಟ್, ಗಗನ್ ಗೌಡ ಬೇಳೂರು, ಆದರ್ಶ್ ಹೆರಟೆ, ಸುವರ್ಣ ಮಧು ಭಟ್, ಮಂಜೇದ್ರಿಗೌಡ್ರು, ವಿಠಲ್ ಚಿಕ್ಕಪೇಟೆ, ವಿಶ್ವನಾಥ್ ನುಲಿಗೇರಿ, ದೇವರಾಜ್ ಚಿಕ್ಕಪೇಟೆ, ಸರೋಜ ಸತೀಶ್, ಬಸವಣ್ಣ ಅವರು ಉಪಸ್ಥಿತರಿದ್ದರು.

Author