ಶಿವಮೊಗ್ಗ ನಗರದಲ್ಲಿ ಕೆಲವು ವಾಹನ ಸವಾರರು ಸಂಚಾರ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದ ಇ-ಚಲನ್ಗಳಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ತಮ್ಮ ವಾಹನಗಳ ನೋಂದಣಿ ಸಂಖ್ಯೆಯ (ನಂಬರ್ ಪ್ಲೇಟ್) ಫಲಕಗಳನ್ನು ತೆಗೆದು ವಾಹನ ಚಲಾಯಿಸುತ್ತಿರುವುದು ಕಂಡುಬಂದಿದ್ದು.

ಈ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗ ನಗರದಾದ್ಯಂತ ಟ್ರಾಫಿಕ್ ಪೊಲೀಸ್ ಇಲಾಖೆಯ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ , ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುತ್ತಿದ್ದ ಸುಮಾರು 70 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸದರಿ ವಾಹನಗಳ ವಿರುದ್ಧ ಕೇಂದ್ರ ಮೋಟಾರು ವಾಹನ ನಿಯಮಗಳು 1988 ನಿಯಮ 50ರ (CMV Rule 50) ಹಾಗೂ ಕಲಂ 177 ಐಎಂವಿ ಕಾಯ್ದೆಯ (IMV Act Section 177) ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಮುಂದಿನ ದಿನಗಳಲ್ಲಿಯೂ ನಂಬರ್ ಪ್ಲೇಟ್ ಇಲ್ಲದೆ ವಾಹನ ಚಲಾಯಿಸುವ ಸವಾರರ ವಿರುದ್ಧ ಇಂತಹ ವಿಶೇಷ ಕಾರ್ಯಾಚರಣೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಪೊಲೀಸ್ ಇಲಾಖೆ ತಿಳಿಸಿದೆ.

ಸಾರ್ವಜನಿಕರು ಕಡ್ಡಾಯವಾಗಿ ನಿಯಮಾನುಸಾರ ನಂಬರ್ ಪ್ಲೇಟ್ ಅಳವಡಿಸಿಕೊಂಡು ಸಂಚಾರ ನಿಯಮಗಳನ್ನು ಪಾಲಿಸುವಂತೆ ಕೋರಲಾಗಿದೆ.
ಈ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ, “ಇದು ಕೊನೆಯ ಎಚ್ಚರಿಕೆ. ಸದ್ಯಕ್ಕೆ ವಾಹನ ಮಾಲೀಕರಿಗೆ ದಂಡ ವಿಧಿಸಿ, ನೋಟಿಸ್ ನೀಡಿ ವಾಹನಗಳನ್ನು ಹಿಂತಿರುಗಿಸಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಇದೇ ರೀತಿಯ ಉಲ್ಲಂಘನೆ ಕಂಡುಬಂದರೆ ನೇರವಾಗಿ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಎಚ್ಚರಿಕೆ ನೀಡಿದರು.

ನಂಬರ್ ಪ್ಲೇಟ್ ಇಲ್ಲದ ಅಥವಾ ನಿಯಮಬಾಹಿರ ನಂಬರ್ ಪ್ಲೇಟ್ ಹೊಂದಿರುವ ವಾಹನಗಳು ಅಪರಾಧ ಕೃತ್ಯಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಸಾಧ್ಯತೆ ಇರುವುದರಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಎಸ್‌ಪಿ ತಿಳಿಸಿದರು.ವಾಹನಗಳಿಗೆ ನಿಗದಿತ ಗಾತ್ರ, ವಿನ್ಯಾಸ ಮತ್ತು ಫಾಂಟ್‌ನಲ್ಲಿಯೇ ನಂಬರ್ ಪ್ಲೇಟ್ ಅಳವಡಿಸಬೇಕು. ಕೆಲವರು ನಂಬರ್ ಪ್ಲೇಟ್‌ಗಳನ್ನು ಬಾಗಿಸಿ ಅಥವಾ ಓದಲು ಸಾಧ್ಯವಾಗದಂತೆ ಮಾರ್ಪಡಿಸುತ್ತಿದ್ದು, ಅಂತಹ ವಾಹನಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ವಾಹನದ ಅಲಂಕಾರಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ವಾಹನ ಖರೀದಿಸುತ್ತಾರೆ. ಆದರೆ ನಿಯಮಾನುಸಾರ ನಂಬರ್ ಪ್ಲೇಟ್ ಅಳವಡಿಸಲು ಹಿಂಜರಿಯುತ್ತಾರೆ. ಇದು ಸರಿಯಲ್ಲ. ಎರಡು ಕೋಟಿ ರೂಪಾಯಿ ಮನೆ ಕಟ್ಟಿದರೂ ಸಿಸಿಟಿವಿ ಅಳವಡಿಸದಂತೆಯೇ ಇದು ಕೂಡ ತಪ್ಪೇ,” ಎಂದು ಎಸ್‌ಪಿ ನಿಖಿಲ್ ಬಿ ಹೇಳಿದರು.


