ಶಿವಮೊಗ್ಗ | ಚಲಿಸುತ್ತಿದ್ದ ಟಾಟಾ ಏಸ್ ಮೇಲೆ ಉರುಳಿದ ಬೃಹತ್ ಮರ ; ವಾಹನದಲ್ಲಿ ಸಿಲುಕಿದ್ದ ಚಾಲಕನ ರಕ್ಷಣೆ

ಶಿವಮೊಗ್ಗ

ಶಿವಮೊಗ್ಗ, ರಿಪ್ಪನ್ ಪೇಟೆ ಸಮೀಪದ ಬರುವೆ ಗ್ರಾಮದ ಆಚಾರ್ ಕೇರಿ ಬಳಿ ಶನಿವಾರ ಸಂಜೆ ಚಲಿಸುತ್ತಿದ್ದ ಬೊಲೆರೋ ಪಿಕಪ್ ವಾಹನದ ಮೇಲೆ ಬೃಹತ್ ಮರವೊಂದು ಏಕಾಏಕಿ ಉರುಳಿ ಬಿದ್ದ ಪರಿಣಾಮ ಚಾಲಕ ವಾಹನದಲ್ಲೇ ಸಿಲುಕಿಕೊಂಡ ಘಟನೆ ನಡೆದಿದೆ.

ಮದೀನಾ ಕಾಲೋನಿ ನಿವಾಸಿ ತೌಸಿಫ್ ಅವರು ಟಾಟಾ ಏಸ್ ವಾಹನದಲ್ಲಿ ತರಕಾರಿ ಮಾರಾಟ ಮುಗಿಸಿ ಬರುವೆ ಗ್ರಾಮದ ಆಚಾರ್ ಕೇರಿ ಭಾಗದ ಮೂಲಕ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮಳೆ ಹಾಗೂ ಗಾಳಿಯ ಪರಿಣಾಮ ರಸ್ತೆ ಬದಿಯಲ್ಲಿದ್ದ ಬೃಹತ್ ಮರ ವಾಹನದ ಮೇಲೆ ಉರುಳಿ ಬಿದ್ದಿದೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡರು. ಇದೇ ವೇಳೆ ಸ್ಥಳೀಯ ನಿವಾಸಿಗಳೂ ಸಹ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿ, ವಾಹನದಲ್ಲಿ ಸಿಲುಕಿದ್ದ ಚಾಲಕನನ್ನು ಹೊರತೆಗೆಯಲು ಹರಸಾಹಸ ಪಟ್ಟರು.

ಅದೃಷ್ಟವಶಾತ್ ಚಾಲಕ ಗಂಭೀರ ಗಾಯಗಳಿಂದ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಆದರೆ ಘಟನೆ ನಡೆದ ಸ್ಥಳದಲ್ಲಿ ಮರದ ಇನ್ನಷ್ಟು ಕೊಂಬೆಗಳು ಕುಸಿಯುವ ಭೀತಿ ಇದ್ದ ಕಾರಣ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

Author