ಶಿವಮೊಗ್ಗ | ಫೇಸ್‌ಬುಕ್‌ನ ಜಾಹೀರಾತು ನಂಬಿ ಲಕ್ಷಾಂತರ ರೂಪಾಯಿ ವಂಚನೆಗೋಳಗಾದ ವ್ಯಕ್ತಿ!

ಕ್ರೈಂ

ಶಿವಮೊಗ್ಗದ ವ್ಯಕ್ತಿಯೊಬ್ಬರು ಹಳೆ ನಾಣ್ಯವನ್ನು ಕೊಟ್ಟರೆ ಹಣ ನೀಡುತ್ತೇವೆ ಎಂದು ಫೇಸ್‌ಬುಕ್‌ನಲ್ಲಿ ಬಂದಿದ್ದ ಜಾಹೀರಾತನ್ನು ನಂಬಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ವಿವರ

ಎಫ್.ಐ.ಆರ್ ನಲ್ಲಿರುವಂತೆ ದೂರುದಾರರು ಮೊಬೈಲ್‌ನಲ್ಲಿ ಫೇಸ್‌ಬುಕ್ ನೋಡುತ್ತಿದ್ದಾಗ, ಅವರಿಗೆ Old Coin Company ಹೆಸರಿನ ಒಂದು ಜಾಹೀರಾತು ಕಂಡಿದೆ. ಅದನ್ನು ಓಪನ್ ಮಾಡಿ ನೋಡಿದಾಗ ಅದರಲ್ಲಿ ಕಂಪನಿಯ ನಂಬರ್ ಇತ್ತು. ಆಗ ದೂರುದಾರರು ಆ ನಂಬರ್‌ಗೆ ಕಾಂಟ್ಯಾಕ್ಟ್ ಮಾಡಿದ್ದಾರೆ. ಹಾಗೆಯೇ ತಮ್ಮ ಬಳಿಯಿದ್ದ ಹಳೆ ನೋಟು ಹಾಗೂ ನಾಣ್ಯಗಳ ಫೋಟೋವನ್ನು ವಂಚಕರಿಗೆ ಕಳುಹಿಸಿದ್ದಾರೆ.

ಇದೇ ಸಮಯವನ್ನು ಬಳಸಿಕೊಂಡು ಮಾರ್ಕೆಟಿಂಗ್‌ಗೆ ಇಳಿದ ವಂಚಕರು, ನಿಮ್ಮ ಹಳೆ ನೋಟಿಗೆ ನಾವು ಬರೋಬ್ಬರಿ 90,00,000 ರೂಪಾಯಿ. ಮೌಲ್ಯ ನಿಗದಿ ಮಾಡಿದ್ದೇವೆ ಎಂದು ಆಸೆ ಹುಟ್ಟಿಸಿದ್ದಾರೆ. ಅಷ್ಟೇ ಅಲ್ಲದೆ, ಇದಾದ ನಂತರ ಹಣ ಕೀಳುವ ಪ್ಲಾನ್ ಮಾಡಿದ್ದಾರೆ. ಅದೇನೆಂದರೆ, ನಾವು ನಿಗದಿಪಡಿಸಿದ ಹಣ ನಿಮ್ಮ ಕೈ ಸೇರಬೇಕೆಂದರೆ ಪ್ರೊಸೆಸಿಂಗ್ ಚಾರ್ಜ್ 750ರೂಪಾಯಿ. ಪಾವತಿಸುವಂತೆ ತಿಳಿಸಿದ್ದಾರೆ.

ಅದರಂತೆ ದೂರುದಾರರು 17-06-2026 ರಂದು ವಂಚಕರು ಕಳುಹಿಸಿದ ಸ್ಕ್ಯಾನರ್‌ಗೆ 750 ರೂಪಾಯಿ. ಹಣ ಪಾವತಿಸಿದ್ದು, ನಂತರದಲ್ಲಿ ಹಣ ಪಡೆಯಲು ವಿವಿಧ ಟ್ಯಾಕ್ಸ್ ಹಾಗೂ ಪರಿಶೀಲನಾ ಶುಲ್ಕಗಳನ್ನು ಕಟ್ಟಬೇಕು ಎಂದು ನಂಬಿಸಿ, ವಿವಿಧ ಹಂತಗಳಲ್ಲಿ ದಿನಾಂಕ: 17-06-2026 ರಿಂದ ದಿ: 09-07-2026 ರವರೆಗೆ ದೂರುದಾರರ ಬ್ಯಾಂಕ್ ಖಾತೆಗಳಿಂದ ಒಟ್ಟು 11,20,599 ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡಿರುತ್ತಾರೆ.

ಈ ರೀತಿಯಾಗಿ ದೂರುದಾರರಿಗೆ Old Coin Company ಯವರಂತೆ ನಟಿಸಿ, ಹಳೆಯ ನಾಣ್ಯ ಮತ್ತು ನೋಟುಗಳಿಗೆ ಹೆಚ್ಚಿನ ಮೌಲ್ಯ ನೀಡುವುದಾಗಿ ನಂಬಿಸಿ ವಂಚಿಸಿದ ವಂಚಕರ ವಿರುದ್ದ ಸೈಬರ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author