ಶಿವಮೊಗ್ಗ | ರಾತ್ರೋರಾತ್ರಿ ನೂರಾರು ಅಡಿಕೆ ಮರಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳು

ಕ್ರೈಂ

ಶಿವಮೊಗ್ಗ, ರಾತ್ರೋರಾತ್ರಿ ನೂರಾರು ಅಡಿಕೆ ಮರಗಳನ್ನು ಕಡಿದು ಹಾಕಿರುವ ಘಟನೆ ಶಿಕಾರಿಪುರ ತಾಲೂಕಿನ ತಾಳಗುಂದ ಹೋಬಳಿ ಬಳ್ಳಿಗಾವಿ ಗ್ರಾಮದಲ್ಲಿ ನಡೆದಿದೆ.ಬಳ್ಳಿಗಾವಿ ಗ್ರಾಮದ ಜಗದೀಶ್ ಎಂಬವರಿಗೆ ಸೇರಿದ ಸುಮಾರು 5 ವರ್ಷದ ಅಡಕೆ ಗಿಡಗಳನ್ನು ಕಡಿದು ಹಾಕಲಾಗಿದೆ. ಒಂದು ಎಕರೆ‌ಗೆ 450 ಅಡಕೆ ಗಿಡಗಳಂತೆ ಸುಮಾರು 3 ಎಕರೆ ಜಮೀನಿನಲ್ಲಿದ್ದ ಗಿಡಗಳನ್ನು ನಾಶಪಡಿಸಲಾಗಿದೆ.

ಗ್ರಾಮದ ನಾಗರಾಜು, ರಾಜು, ಚಿನ್ನಪ್ಪ, ವಿರೂಪಾಕ್ಷಪ್ಪ, ಕರಿಬಸಪ್ಪ ಹಾಗೂ ಇತರರ ವಿರುದ್ಧ ಜಗದೀಶ್ ಶಿರಾಳಕೊಪ್ಪ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಜಗದೀಶ್ ಅವರು ಸರ್ವೇ ನಂಬರ್ 105ರಲ್ಲಿ 3-15 ಭೂ ನ್ಯಾಯಮಂಡಳಿಯ ಆದೇಶದಂತೆ ಮಂಜೂರಾತಿಯಾಗಿರುವ ಜಮೀನಿನಲ್ಲಿ ಕುಟುಂಬಸಮೇತ ಅಡಕೆ ಹಾಗೂ ಭತ್ತ ಕೃಷಿ ಮಾಡುತ್ತಿದ್ದಾರೆ.

“3 ಎಕರೆ 14 ಗುಂಟೆ ಜಮೀನು ನಮಗೆ ಉಳುವವನೇ ಭೂ ಒಡೆಯ ಎಂಬ ಕಾನೂನಿನಡಿ ಲಭ್ಯವಾಗಿತ್ತು. ಇದರಲ್ಲಿ 1 ಎಕರೆ ಅಡಕೆ ತೋಟ, ಉಳಿದ ಜಮೀನಿನಲ್ಲಿ ಭತ್ತ ಬೆಳೆಯುತ್ತಿದ್ದೇವೆ. ಈಗ ನಾಟಿ ಮಾಡಲಾಗಿದೆ. ಆದರೆ ಗ್ರಾಮದವರು ಇದು ದೇವರ ಜಮೀನು ಎಂದು ತಕರಾರು ತೆಗೆದುಕೊಂಡು ನಮಗೆ ಕಿರುಕುಳ ನೀಡುತ್ತಿದ್ದಾರೆ.‌ ಉಳುವವನೇ ಭೂ ಒಡೆಯ ಕಾನೂನಿನ ಪ್ರಕಾರ ಜಮೀನು ನಮಗೆ ಲಭ್ಯವಾಗಿದೆ.

ಈ ಕುರಿತು ಖಾತೆಗಾಗಿ ಕಳೆದ ತಿಂಗಳು ಶಿಕಾರಿಪುರ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದು, ಅದು ಇನ್ನೂ ಪೆಂಡಿಂಗ್ ಇದೆ. ನಮಗೆ ನ್ಯಾಯ ಒದಗಿಸಿಕೊಡಿ” ಎಂದು ಜಗದೀಶ್ ಮನವಿ ಮಾಡಿದರು.

Author