ಶಿವಮೊಗ್ಗ, ಮಾದಕ ವ್ಯಸನಗಳಿಗೆ ದಾಸರಾಗುವುದರಿಂದ ಉಜ್ವಲವಾದ ಭವಿಷ್ಯವು ನಾಶಗೊಳ್ಳುತ್ತದೆ. ಮಾದಕ ದ್ರವ್ಯಗಳನ್ನು ಸೇವಿಸುವುದು ಅಪರಾಧವಾಗಿದೆ. ಈ ರೀತಿಯ ವ್ಯವಹಾರಗಳು ಕಂಡು ಬಂದಲ್ಲಿ ಕಾನೂನು ಪ್ರಕಾರ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ ಎಂದು ಟ್ರಾಫಿಕ್ ಪೋಲಿಸ್ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಟಿ ವಿ ಹೇಳಿದರು.
ನಗರದ ಪಿಇಎಸ್ಐಎಎಂಎಸ್ ಕಾಲೇಜಿನಲ್ಲಿ ಯುವ ರೆಡ್ಕ್ರಾಸ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಗಳ ಸಹಯೋಗದಲ್ಲಿ ಅಂತರರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಅವರು ಸೈಬರ್ ಅಪಾಯಗಳು, ಮಾದಕ ದ್ರವ್ಯಗಳಿಂದ ಆಗುವ ದುಷ್ಪರಿಣಾಮಗಳು ಹಾಗೂ ಸಂಚಾರ ಸುರಕ್ಷತೆ ಎಂಬ ವಿಷಯಗಳ ಕುರಿತು ಮಾಹಿತಿಯನ್ನು ನೀಡಿದರು.
ಸೈಬರ್ಕ್ರೈಮ್, ಎಟಿಎಂ ಕಾರ್ಡ್ ಹ್ಯಾಕ್, ಎನಿ ಡೆಸ್ಕ್ಆಪ್ ಮೊದಲಾದವುಗಳ ಬಗ್ಗೆ ತಿಳಿಸಿದರು. ನಮ್ಮ ಮೊಬೈಲ್ಗಳನ್ನು ಹೇಗೆ ಹ್ಯಾಕ್ ಮಾಡಲಾಗುತ್ತದೆ ಹಾಗೂ ಅದರಿಂದ ನಾವು ಹೇಗೆ ಜಾಗರೂಕರಾಗಿರಬೇಕು ಎಂಬ ಅರಿವನ್ನು ಮೂಡಿಸಿದರು. ಅಂತಹ ಸಮಸ್ಯೆಗಳು ಬಂದಾಗ ಸೈಬರ್ ಕ್ರೈಮ್ ದೂರವಾಣಿ ಸಂಖ್ಯೆ ೧೯೩೦ ಕ್ಕೆ ಕರೆಯನ್ನು ಮಾಡುವುದರ ಮೂಲಕ ದೂರನ್ನು ದಾಖಲಿಸಬೇಕೆಂದು ನುಡಿದರು.
ಕೆಲಸವನ್ನು ಕೊಡಿಸುವುದಾಗಿ ಹೇಳುವ ವಂಚನೆಯ ಜಾಲಗಳು, ಸಾಲ ನೀಡುವುದಾಗಿ ಹೇಳುವ ವಂಚನೆಯ ಜಾಲಗಳು, ಒಎಲ್ಎಕ್ಸ್ ಮೊದಲಾದವುಗಳಲ್ಲಿ ಆಗುವಂತಹ ವಂಚನೆಗಳನ್ನು ವೀಡಿಯೋಗಳ ಮೂಲಕ ಪ್ರದರ್ಶಿಸಿದರು. ಸಂಚಾರಿ ಸುರಕ್ಷತೆಯಲ್ಲಿ ವಾಹನ ಸವಾರರು ಅನುಸರಿಸಬೇಕಾದ ಕ್ರಮಗಳ ಕುರಿತು ಅರಿವನ್ನು ಮೂಡಿಸಿದರು.
ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ಗಳನ್ನು ಧರಿಸುವುದು, ಅತಿವೇಗದ ಚಾಲನೆಯನ್ನು ತಪ್ಪಿಸುವುದು iತ್ತು ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವುದನ್ನು ತಡೆಯುವ ಮೂಲಕ ಸುರಕ್ಷಿತ ಸಂಚಾರವನ್ನು ಮಾಡುವ ಮೂಲಕ ಕಾನೂನಿನ ನಿಯಮಗಳನ್ನು ಪಾಲಿಸಬೇಕೆಂದು ಕಿವಿಮಾತನ್ನು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸುದರ್ಶನ್ ಜಿ ಎಂ. ಮಾತನಾಡಿ, ಈ ರೀತಿಯ ಉಪನ್ಯಾಸಗಳು ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸಿ ಅವರಲ್ಲಿ ಎಚ್ಚರವನ್ನು ಉಂಟು ಮಾಡುತ್ತವೆ. ವಿದ್ಯಾರ್ಥಿಗಳು ಕಾನೂನಿನ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡು ಅದನ್ನು ಪಾಲಿಸಬೇಕು ಎಂದು ನುಡಿದರು.
ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥ ಮೋಹನ್ ಡಿ, ಯುವ ರೆಡ್ಕ್ರಾಸ್ ಘಟಕದ ಸಂಚಾಲಕಿ ಅಶ್ವಿನಿ ಹೆಚ್ ಸಿ, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಎನ್. ಪ್ರವೀಣ್ಚಂದ್ರ, ಉಪನ್ಯಾಸಕರಾದ ಉತ್ಕರ್ಷ್ ಸಿಂಗ್ ಮತ್ತು ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ಪೂಜಾ ಎಸ್ ಸ್ವಾಗತಿಸಿದರು. ಜಾಹ್ನವಿ ವಂದಿಸಿದರು. ಜನ್ಮಶ್ರೀ ನಿರೂಪಿಸಿದರು.





