ಶಿವಮೊಗ್ಗ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮುಂದುವರೆದಿದೆ. ಬಸ್ ಹತ್ತುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗನ್ನೇ ಕಳ್ಳರು ಕಸಿದುಕೊಂಡು ಪರಾರಿಯಾಗಿದ್ದಾರೆ.
ಘಟನೆಯಲ್ಲಿ ವ್ಯಾನಿಟಿ ಬ್ಯಾಗಿನಲ್ಲಿದ್ದ ₹2.86 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ.ಗಾಂಧಿ ಬಜಾರ್ ನಿವಾಸಿ ಜಯಲಕ್ಷ್ಮಿ (53) ಅವರು ತಮ್ಮ ಮಗನೊಂದಿಗೆ ಸಾಗರದಲ್ಲಿರುವ ಸಂಬಂಧಿಕರ ಮದುವೆಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಿದ್ದರು.
ಸಾಗರಕ್ಕೆ ತೆರಳುವ ಬಸ್ ಬಂದಾಗ ಹತ್ತಲು ಹೋದ ವೇಳೆ ಜನದಟ್ಟಣೆ ಇತ್ತು. ಈ ಸಂದರ್ಭ ಅವರು ತಮ್ಮ ಎಡತೋಳಿಗೆ ಹಾಕಿಕೊಂಡಿದ್ದ ವ್ಯಾನಿಟಿ ಬ್ಯಾಗ್ ಅನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

