ಶಿವಮೊಗ್ಗ | ಚಾಕು ತೋರಿಸಿ ದರೋಡೆ ಪ್ರಕಾರಣದ ಆರೋಪಿಗೆ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ

ಕ್ರೈಂ

ಶಿವಮೊಗ್ಗದಲ್ಲಿ ಐದು ವರ್ಷಗಳ ಹಿಂದೆ ಶಿವಮೊಗ್ಗ ನಗರದ ರಾಗಿಗುಡ್ಡ ಕ್ರಾಸ್ ಸಮೀಪ ನಡೆದಿದ್ದ ಚಾಕು ತೋರಿಸಿ ದರೋಡೆ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ತೀರ್ಪು ನೀಡಿದೆ.

2021ರ ಮೇ 4ರಂದು ಬೆಳಗಿನ ಜಾವ ಶಿವಮೊಗ್ಗ ನಗರದ ಹೊನ್ನಾಳಿ ರಸ್ತೆಯ ರಾಗಿಗುಡ್ಡ ಕ್ರಾಸ್ ಬಳಿ ಸುನೀಲ್ (26) ಅವರು ಮೊಪೆಡ್‌ನಲ್ಲಿ ತೆರಳುತ್ತಿದ್ದ ವೇಳೆ, ಬೈಕ್‌ನಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ಅವರನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ ₹500 ನಗದು, ಮೊಬೈಲ್ ದೂರವಾಣಿ ಹಾಗೂ ಬ್ಯಾಂಕ್ ಎಟಿಎಂ ಕಾರ್ಡ್‌ಗಳನ್ನು ಕಸಿದುಕೊಂಡು ಪರಾರಿಯಾಗಿದ್ದರು.

ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಆಗಿನ ಪೊಲೀಸ್ ನಿರೀಕ್ಷಕರಾದ ಸಂಜೀವ್ ಕುಮಾರ್ ಅವರು ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ಶಿವಮೊಗ್ಗದ ಪ್ರಥಮ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಿತು.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶ್ರೀಮತಿ ಮಮತಾ ಬಿ.ಎಸ್. ಅವರು ವಾದ ಮಂಡಿಸಿದರು.ವಿಚಾರಣೆ ವೇಳೆ ಆರೋಪಿ ಮೊಹಮ್ಮದ್ ನೂರುಲ್ಲಾ @ ಇಂಗ್ಲಿಷ್ ವಿರುದ್ಧ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧೀಶರಾದ ಅಭಯ್ ಧನಪಾಲ್ ಚೌಗಲ ಅವರು ಆರೋಪಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹10,000 ದಂಡ ವಿಧಿಸಿ ಆದೇಶ ನೀಡಿದ್ದಾರೆ.

Author