ಕರ್ನಾಟಕ, ಕೇರಳಂನಲ್ಲಿ ಬಿಜೆಪಿ ಅಧಿಕಾರಕ್ಕೆ : ಪ್ರಧಾನಿ ಮೋದಿ

ರಾಜಕೀಯ

ಬೆಂಗಳೂರು,ಬಂಗಾಳದ ಗೆಲುವಿನ ಉತ್ಸಾಹ ಹೆಚ್ಚಾಗಿದ್ದು ಮುಂದೆ ಕೇರಳ ,ಕರ್ನಾಟಕದಲ್ಲೂ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೆಚ್‌ಎಎಲ್‌‍ ವಿಮಾನ ನಿಲ್ದಾಣದ ಪಾರ್ಕಿಂಗ್‌ ಪ್ರದೇಶದಲ್ಲಿ ರಾಜ್ಯ ಬಿಜೆಪಿ ಘಟಕ ಹಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಎಲ್ಲರಿಗೂ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಅವರು ವಿಮಾನ ನಿಲ್ದಾಣದಲ್ಲಿ ಇಂತಹ ಕಾರ್ಯಕ್ರಮ ಇದೇ ಮೊದಲು. ಬೆಂಗಳೂರಿನ ನೆಲದಲ್ಲಿ ಕೇಸರಿ ರಾರಾಜಿಸುತ್ತಿದೆ.

1857ರಲ್ಲಿ ಮೊದಲ ಸ್ವಾತಂತ್ರ ಸಂಗ್ರಾಮ ಶುರುವಾಯಿತು. ಆ ಹೋರಾಟ ದೊಡ್ಡ ಜ್ವಾಲೆ ಆಗಿ ಗುಲಾಮಗಿರಿಯ ಬೇಲಿಯನ್ನು ಕಿತ್ತು ಹಾಕಿತು ಅದೇ ರೀತಿ ಸಂಗ್ರಾಮ ಪಶ್ಚಿಮ ಬಂಗಾಳದಲ್ಲಿ ನಡೆದು ದೊಡ್ಡ ಗೆಲುವು ಲಭಿಸಿತು. ಅದು ನಿಮ್ಮ ಗೆಲುವು ಎಂದು ಪ್ರಧಾನಿ ಹೇಳಿದರು.

ಇದರಿಂದ ಕಾಂಗ್ರೆಸ್ ನಿರಾಸೆಯಲ್ಲಿ ಮುಳುಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಈಗ ಯಾವುದೇ ಸಿದ್ಧಾಂತ ಉಳಿದಿಲ್ಲ ಎಂಬುದು ಈಗ ಗೊತ್ತಾಗುತ್ತಿದೆ ಎಂದರು.

ಲೋಕಕಲ್ಯಾಣ ಬಿಜೆಪಿಯ ಆದ್ಯತೆಯಾಗಿದೆ ಒಳ್ಳೆಯ ಸರ್ಕಾರ ನಮ ಮಾದರಿ.50 ಕೋಟಿ ಜನ ಬಡತನದಿಂದ ಹೊರಬಂದಿರೋದು ಇದಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ನ ಆಡಳಿತ ವಿರೋಧಿ ಅಲೆ ಶುರುವಾಗುತ್ತೆ. ಕಾಂಗ್ರೆಸ್‌ನ ಗ್ಯಾರಂಟಿಯೂ ಸುಳ್ಳು. ನಾವು ಮೂರು ವರ್ಷದಿಂದ ಕರ್ನಾಟಕದಲ್ಲಿ ನೋಡಿದ್ದೇವೆ. ಜನರ ಸಮಸ್ಯೆ ಬಗೆಹರಿಸುವ ಬದಲು ಆಂತರಿಕ ಜಗಳದಲ್ಲಿ ಮುಳುಗಿದ್ದಾರೆ. ಇಲ್ಲಿನ ಸಿಎಂ ಎಷ್ಟು ದಿನ ಉಳಿಯುತ್ತಾರೋ, ಮತ್ತೊಬ್ಬರಿಗೆ ಅವಕಾಶ ಸಿಗುತ್ತೋ ಇಲ್ಲವೋ ಎಂಬ ಚಿಂತೆಯಲ್ಲಿ ಈ ಸರ್ಕಾರ ಮುಳುಗಿದೆ.

ರಾಜಸ್ಥಾನದಲ್ಲಿ ಇದೇ ಆಗಿತ್ತು. ಈಗ ಕೇರಳದಲ್ಲಿಯೂ ಅದು ನಡೆದಿದೆ ಎಂದು ಕಾಂಗ್ರೆಸ್‌‍ ವಿರುದ್ಧ ಕಿಡಿಕಾರಿದರು. ಪುದುಚೇರಿಯಲ್ಲಿ ಎರಡನೇ ಬಾರಿ ಅಸ್ಸಾಂನಲ್ಲಿ ಮೂರನೆ ಬಾರಿಗೆ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಸ್ಸಾಂನಲ್ಲಿ ಬಿಜೆಪಿಗೆ ದೊಡ್ಡ ಬಹುಮತ ಸಿಕ್ಕಿದೆ ಈ ನಡುವೆ ಗುಜರಾತ್‌ ಸ್ಥಳಿಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಮಟ್ಟಿನ ಗೆಲುವು ಸಿಕ್ಕಿದೆ, ಹೊಸ ಇತಿಹಾಸ ಬರೆದಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ದೇಶದಲ್ಲಿ ಬಿಜೆಪಿ ದೊಡ್ಡ ಶಕ್ತಿ ಇದೆ. ಆಂಧ್ರದಲ್ಲಿ ಎನ್‌ಡಿಎ ಸರ್ಕಾರ ಇದೆ, ತೆಲಂಗಾಣದಲ್ಲಿ ಬಿಜೆಪಿ ಎರಡನೇ ಸ್ಥಾನದಲ್ಲಿ ಇದೆ ಎಂದು ಹೇಳಿದರು. ಮುಂದೆ ಕರ್ನಾಟಕದಲ್ಲೂ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ದೇಶದ ಅತಿ ದೊಡ್ಡ ಮಹಿಳಾ ವಿರೋಧಿ ಪಕ್ಷ. ಮಹಿಳಾ ಬಿಲ್ ಸಂಸತ್ತಲ್ಲಿ ಪಾಸ್ ಆಗಿದ್ದರೆ ಮಹಿಳೆಯರ ಶಕ್ತಿ ಹೆಚ್ಚುತ್ತಿತ್ತು. ಕರ್ನಾಟಕದಿಂದಲೂ ಹೆಚ್ಚಿನ ಸಂಖ್ಯೆಯ ಮಹಿಳಾ ಶಾಸಕರು, ಸಂಸದರು ಬರಬಹುದಿತ್ತು. ಕಾಂಗ್ರೆಸ್‌ನ ಈ ದ್ರೋಹವನ್ನು ದೇಶದ ಜನ ಕ್ಷಮಿಸಲ್ಲ ಎಂದು ವಾಗ್ದಾಳಿ ನಡೆಸಿದರು.

ಇದೇ ಸಂದರ್ಭದಲ್ಲಿ ವೇದಿಕೆ ಮೇಲೆ ಪ್ರಧಾನಿ ಮೋದಿಗೆ ಮೈಸೂರು ಪೇಟ, ಶಾಲು ಹೊದಿಸಿ ಸನಾನ ಮಾಡಲಾಯಿತು. ಅಲ್ಲದೇ ರಾಜ್ಯ ಬಿಜೆಪಿ ನಾಯಕರು 13 ಕೆಜಿಯ ಮೋದಿಯವರ ಬೆಳ್ಳಿ ಪ್ರತಿಮೆ ನೀಡಿ ಗೌರವಿಸಿದರು. ಪ್ರತಿಪಕ್ಷ ನಾಯಕರಾದ ಅಶೋಕ್, ಛಲವಾದಿ ನಾರಾಯಣ ಸ್ವಾಮಿ ,ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಂಸದರು, ಶಾಸಕರು, ಮುಖಂಡರು ಸೇರಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

Author