ಧಾರವಾಡದ ಕೇಂದ್ರ ಕಾರಾಗೃಹದ ಜೈಲರ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಹೊಸ ಬಸ್ ನಿಲ್ದಾಣದ ಬಳಿ ಇರುವ ಕಾರಾಗೃಹದ ವಸತಿ ಗೃಹದಲ್ಲಿ ಶುಕ್ರವಾರ ನಡೆದಿದೆ.ಸಿದ್ಧರಾಮಪ್ಪ ವಡ್ಡರ್ (37) ಆತ್ಮಹತ್ಯೆಗೆ ಶರಣಾದ ಜೈಲರ್.
ಕಳೆದ ಎರಡು ತಿಂಗಳ ಹಿಂದೆ ಸಿದ್ದರಾಮಪ್ಪ ಅಮಾನತಾಗಿ ಮೈಸೂರು ಕಾರಾಗೃಹಕ್ಕೆ ವರ್ಗಾವಣೆ ಆಗಿದ್ದರು. ಆದರೆ ಇನ್ನೂ ಹೋಗಿ ವರದಿ ಮಾಡಿಕೊಂಡಿರಲಿಲ್ಲ. ಶುಕ್ರವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ.
ಎರಡು ತಿಂಗಳ ಹಿಂದೆ ಜೈಲಿನಲ್ಲಿ ಕರ್ತವ್ಯ ಲೋಪದ ಹಿನ್ನೆಲೆ ಅವರನ್ನು ಅಮಾನತು ಮಾಡಲಾಗಿತ್ತು. ಪತ್ನಿ ಹಾಗೂ ಇಬ್ಬರು ಮಕ್ಕಳು ಬೇರೆ ಊರಿಗೆ ಹೋದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಮೃತ ಸಿದ್ದರಾಮಪ್ಪ ಪತ್ನಿ ಲಕ್ಷ್ಮಿ ಪ್ರತಿಕ್ರಿಯಿಸಿದ್ದು, ಕಾರಾಗೃಹದ ಮೇಲಾಧಿಕಾರಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
“ಮೇಲಾಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇಲಾಧಿಕಾರಿ ಅವರೇ ನನ್ನ ಗಂಡನ ಜೀವ ಪಡೆದವರು. ಅಮಾನತು ಮಾಡಿದ್ದಾರೆ. ಜೈಲಿಗೆ ಹಾಕುತ್ತಾರೆ ಎಂದು ಆತ್ಮಹತ್ಯೆ ಮಾಡಕೊಂಡಿದ್ದಾರೆ.
ಸಸ್ಪೆಂಡ್ ಮಾಡಿ ಮೈಸೂರಿಗೆ ವರ್ಗಾವಣೆ ಮಾಡಿದ್ರು. ಮೈಸೂರಿಗೆ ಕರ್ತವ್ಯಕ್ಕೆ ಹಾಜರಾಗಲು ಹೊರಟ್ಟಿದ್ದರು. ಆದ್ರೆ ತಂದೆ, ತಾಯಿ ಮುಖ ನೋಡಿ ಹೋಗ್ತೀನಿ ಅಂತ ಹೇಳಿ ಹೀಗೆ ಮಾಡಿಕೊಂಡ್ರು. ತಮ್ಮ ಮೇಲೆ ಕ್ರಮ ಆಗುತ್ತದೆ ಏನ್ ಮಾಡಬೇಕು ಅಂತಿದ್ರು. ಯಾವಾಗಲೂ ಮೇಲಾಧಿಕಾರಿಗಳು ನನ್ನ ಜೈಲಿಗೆ ಕಳಿಸ್ತಾರೆ ಅಂತಿದ್ರು. ಮೇಲಾಧಿಕಾರಿಗಳ ಭಯದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ” ಎಂದು ಆರೋಪಿಸಿದ್ದಾರೆ.


