ಸರ್ಕಾರಿ ಅಧಿಕಾರಿಯೊಬ್ಬರಿಗೆ ಲೈಂಗಿಕ ಕಿರುಕುಳ, ಬೆದರಿಕೆ ; ಗುತ್ತಿಗೆದಾರನ ವಿರುದ್ಧ ದೂರು

ಶಿವಮೊಗ್ಗ

ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳಾ ಸರ್ಕಾರಿ ಅಧಿಕಾರಿಯೊಬ್ಬರಿಗೆ ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಾಗರದ ನಗರಸಭೆ ಆವರಣದಲ್ಲಿ ನಡೆದ ಕೃತ್ಯಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ನಾಗರಾಜ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ(FIR) ದಾಖಲಿಸಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆ

​ಸಾಗರ ತಾಲ್ಲೂಕಿನ ಎ.ಕೆ. ಕಾಲೋನಿ ನಿವಾಸಿಯಾದ 45 ವರ್ಷದ ಸಂತ್ರಸ್ತೆಯೊಬ್ಬರು ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ದೂರುದಾರರು ಸರ್ಕಾರಿ ಇಲಾಖೆಯಲ್ಲಿ ನಾನ್ ಗೆಜೆಟೆಡ್ (Non-Gazetted) ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ದೂರಿನ ಅನ್ವಯ, ಆರೋಪಿ ನಾಗರಾಜ್ (A1) ಎಂಬ ಗುತ್ತಿಗೆದಾರನು ಕಳೆದ 2023ರ ಜೂನ್ ತಿಂಗಳಿನಿಂದ 2026ರ ಜೂನ್ 8ರ ಅವಧಿಯಲ್ಲಿ ಸಾಗರ ನಗರಸಭೆಯ ಆವರಣದಲ್ಲಿ ದೂರುದಾರರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ.

“ನಿನ್ನ ಗಂಡ ಕುಡುಕ, ಅವನಿಂದ ನಿನಗೆ ದೈಹಿಕ ಸುಖ ಸಿಗುವುದಿಲ್ಲ. ನಾನು ನಿನಗೆ ಆಭರಣಗಳನ್ನು ಕೊಡುತ್ತೇನೆ, ನನ್ನೊಂದಿಗೆ ಸಹಕರಿಸು” ಎಂದು ಹೇಳಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಅಷ್ಟೇ ಅಲ್ಲದೆ, ಸಂತ್ರಸ್ತೆ ಮಾರುಕಟ್ಟೆಗೆ ಅಥವಾ ಹೊರಗಡೆ ಹೋದಾಗಲೂ ಹಿಂದೆ ಬಂದು ದೈಹಿಕವಾಗಿ ಹಾಗೂ ಮಾನಸಿಕವಾಗಿ ಪೀಡಿಸಿ, ತನಗೆ ಸಹಕರಿಸದಿದ್ದರೆ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಯ ಸೆಕ್ಷನ್ 173ರ ಅಡಿಯಲ್ಲಿ ಶಿವಮೊಗ್ಗದ 2ನೇ ಜೆ.ಎಂ.ಎಫ್‌.ಸಿ (JMFC) ನ್ಯಾಯಾಲಯದ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Author