ದಶಕಗಳ ಕನಸಾಗಿದ್ದ ‘ಶಿವಮೊಗ್ಗ – ಶೃಂಗೇರಿ – ಮಂಗಳೂರು’ ನೂತನ ರೈಲು ಮಾರ್ಗ ಕುರಿತು ಸಂಸದರಿಂದ ಮತ್ತಷ್ಟು ಅಪ್ಡೇಟ್

ಶಿವಮೊಗ್ಗ

ಶಿವಮೊಗ್ಗ – ಮಲೆನಾಡು ಹಾಗೂ ಕರಾವಳಿ ಭಾಗದ ಜನತೆಗೆ ಒಂದು ಅತ್ಯಂತ ಹೆಮ್ಮೆಯ ಮತ್ತು ಐತಿಹಾಸಿಕ ಸುದ್ದಿ! ಶಿವಮೊಗ್ಗ ಕ್ಷೇತ್ರದ ದಶಕಗಳ ಕನಸಾಗಿದ್ದ ‘ಶಿವಮೊಗ್ಗ – ಶೃಂಗೇರಿ – ಮಂಗಳೂರು’ ನೂತನ ರೈಲು ಮಾರ್ಗ ನಿರ್ಮಾಣದ ಮಹತ್ವಾಕಾಂಕ್ಷಿ ಯೋಜನೆಗೆ ಈಗ ಮತ್ತಷ್ಟು ವೇಗ ಸಿಕ್ಕಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದ್ದಾರೆ.

ಈ ಬೃಹತ್ ಯೋಜನೆಗೆ ಸಂಬಂಧಿಸಿದಂತೆ ಅಂತಿಮ ಸ್ಥಳ ಸಮೀಕ್ಷೆ (FLS) ಮತ್ತು ವಿಸ್ತೃತ ಯೋಜನಾ ವರದಿ (DPR) ತಯಾರಿಕೆಗೆ ಅಧಿಕೃತ ಅನುಮೋದನೆ ದೊರೆತಿದ್ದು, ಶೀಘ್ರದಲ್ಲಿಯೇ ಟೆಂಡರ್ ಕರೆಯಲು ಇಲಾಖೆಯು ಸಂಪೂರ್ಣ ಸಿದ್ಧತೆ ನಡೆಸಿದೆ ಎಂದರು.

ಯೋಜನೆಯ ಮುಖ್ಯಾಂಶಗಳು:

ಒಟ್ಟು ಉದ್ದ: 332 ಕಿ.ಮೀ.

ಅಂದಾಜು ವೆಚ್ಚ: ₹3,300 ಕೋಟಿ

ನೇರ ಲಾಭ ಪಡೆಯುವ ಜಿಲ್ಲೆಗಳು: ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಹಾವೇರಿ ಮತ್ತು ಚಿತ್ರದುರ್ಗ.

ಪ್ರಮುಖ ಸಂಪರ್ಕ ತಾಲೂಕುಗಳು:

ಹೊಸನಗರ, ತೀರ್ಥಹಳ್ಳಿ, ಶೃಂಗೇರಿ ಹಾಗೂ ಕಾರ್ಕಳ.ಈ ರೈಲ್ವೆ ಮಾರ್ಗವು ಮಲೆನಾಡು ಮತ್ತು ಕರಾವಳಿಯ ನಡುವೆ ವಾಣಿಜ್ಯ ವ್ಯವಹಾರ, ಕೃಷಿ ಉತ್ಪನ್ನಗಳ ಸುಲಭ ಸಾಗಣೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೊಸ ಕ್ರಾಂತಿಯನ್ನೇ ಸೃಷ್ಟಿಸಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ನಮ್ಮ ಮಲೆನಾಡಿನ ಭಾಗದ ಜನರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಲು ಮತ್ತು ಈ ಬೃಹತ್ ಯೋಜನೆಗೆ ಅನುಮೋದನೆ ನೀಡಿದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ, ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ನನ್ನ ಹಾಗೂ ನಮ್ಮ ಕ್ಷೇತ್ರದ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಹ ಸಂಸದರು ತಿಳಿಸಿದ್ದಾರೆ.

Author