ಶಿವಮೊಗ್ಗ | ಸರ್ಕಾರಿ ಮಹಿಳಾ ಕಾಲೇಜು ಕಟ್ಟಡಕ್ಕೆ ಜಾಗ ಹಸ್ತಾಂತರ

ರಾಜಕೀಯ

ಶಿವಮೊಗ್ಗ: ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯಲ್ಲಿರುವ ಮೈನ್‌ ಮಿಡ್ಲ್‌ ಸ್ಕೂಲ್‌ ಆವರಣದಲ್ಲಿನ ಶಿಥಿಲಗೊಂಡಿರುವ ತಮಿಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವಿರುವ ಜಾಗವನ್ನು ಹಸ್ತಾಂತರಿಸಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಶದಲ್ಲಿರುವ ಈ ಜಾಗವನ್ನು ಮಹಿಳಾ ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗೆ 27 ಗುಂಟೆ ಜಾಗವನ್ನು ಹಸ್ತಾಂತರಿಸಿ ಮೇ 22 ರಂದು ಆದೇಶ ಹೊರಡಿಸಲಾಗಿದೆ.ಮೈನ್‌ ಮಿಡ್ಲ್‌ ಸ್ಕೂಲ್‌ ಆವರಣದಲ್ಲಿ ಮೈನ್‌ ಮಿಡ್ಲ್‌ ಸ್ಕೂಲ್‌, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಬಾಲಕಿಯರ ಪದವಿಪೂರ್ವ ಕಾಲೇಜು, ಸರ್ಕಾರಿ ಉರ್ದು ಶಾಲೆ, ತಮಿಳು ಪ್ರೌಢ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.

ಇಲ್ಲಿರುವ 27 ಗುಂಟೆ ಜಾಗವನ್ನು ಮಹಿಳಾ ಪ್ರಥಮ ದರ್ಜೆ ಕಾಲೇಜು ನಿರ್ಮಾಣಕ್ಕೆ ಬಿಟ್ಟುಕೊಡಬೇಕೆಂಬ ಪ್ರಸ್ತಾವನೆ ಕಾಲೇಜು ಶಿಕ್ಷಣ ಇಲಾಖೆಯಿಂದ ಬಂದಿತ್ತು. ಸ್ಥಳೀಯ ಶಾಸಕರು ಈ ಬಗ್ಗೆ ಸಚಿವ ಮಧುಬಂಗಾರಪ್ಪ ಅವರಿಗೆ ಮನವಿ ಮಾಡಿದ್ದರು. ಇದರ ಅನ್ವಯ ಸಚಿವರು ಇತ್ತೀಚೆಗೆ ಸ್ಥಳ ಪರಿಶೀಲನೆ ಮಾಡಿ ಕಾಲೇಜು ಶಿಕ್ಷಣ ಇಲಾಖೆಗೆ ಜಾಗ ಹಸ್ತಾಂತರಿಸುವಂತೆ ಶಿಫಾರಸು ಮಾಡಿದ್ದರು.

ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಶಿವಮೊಗ್ಗ ಶಾಸಕ ಎಸ್.‌ಎನ್.‌ ಚೆನ್ನಬಸಪ್ಪ ಅವರು ವಿಷಯ ಪ್ರಸ್ತಾಪಿಸಿ ನಮ್ಮ ಮನವಿ ಮೇರೆಗೆ ನೀವು ಸ್ಥಳ ಪರಿಶೀಲನೆ ಮಾಡಿ ಇಲಾಖೆಗೆ ಪತ್ರ ಬರೆದಿದ್ದೀರಿ. ಆದರೆ ಈವರೆಗೆ ಆದೇಶವಾಗಿಲ್ಲ ಎಂದು ವಿಷಯ ಪ್ರಸ್ತಾಪ ಮಾಡಿದ್ದರು. ಸಭೆಯಲ್ಲಿಯೂ ತಮ್ಮ ಇಲಾಖೆ ಆಯುಕ್ತರೊಂದಿಗೆ ದೂರುವಾಣಿ ಮೂಲಕ ಮಾತನಾಡಿದ ಸಚಿವ ಮಧುಬಂಗಾರಪ್ಪ ಅವರು, ಕೂಡಲೇ ಆದೇಶ ಮಾಡುವಂತೆ ಸೂಚಿಸಿದ್ದರು.

ಈ ಬಗ್ಗೆ ಪತ್ರ ವ್ಯವಹಾರ ಮೊದಲೇ ಆಗಿದ್ದರಿಂದ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ ಶುಕ್ರವಾರವೇ ಆದೇಶ ಹೊರಬಿದ್ದಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಶಾಶ್ವತವಾದ ಜಾಗ ಸಿಕ್ಕಂತಾಗಿದೆ.

Author