ಶಿವಮೊಗ್ಗ, ಉಡಾನ್ ಯೋಜನೆ ಹಾಗೂ ವಿಮಾನ ನಿಲ್ದಾಣದ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ವಿನಕಾರಣ ಟೀಕಿಸುವ ಸಂಸದರು, ದೇಶಾ ದ್ಯಂತ ಚರ್ಚೆಯಾಗಿರುವ ನೀಟ್ ಪರೀಕ್ಷಾ ಅಕ್ರಮ, ಬೆಲೆ ಏರಿಕೆ ಬಗ್ಗೆ ಮೌನ ವಹಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹೆಚ್.ಸಿ. ಯೋಗೀಶ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪೈಲೆಟ್ಗಳಿಗೆ ಹೊಸ ನೀತಿ ಅಳವಡಿಸಿದ್ದರಿಂದ ಇಡೀ ದೇಶದಲ್ಲಿ ವಿಮಾನ ಯಾನ ಸಂಸ್ಥೆ ನಷ್ಟದಲ್ಲಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದ ನೀತಿಗಳೇ ಕಾರಣವಾಗಿವೆ. ಆದರೆ ಈ ಬಗ್ಗೆ ಸಂಸದರು ಚಕಾರ ಎತ್ತುತ್ತಿಲ್ಲ. ಏರ್ ಇಂಡಿಯಾದ ೧೦೦ ವಿಮಾ, ಇಂಡಿಗೋದ ೮೦ ವಿಮಾನಗಳು ಹಾರಾಟ ನಿಲ್ಲಿಸಿವೆ ಎಂದು ವಿವರಿಸಿದರು.
ಶಿವಮೊಗ್ಗದ ನೈಟ್ ಲ್ಯಾಂಡಿಂಗ್ ಸಮಸ್ಯೆ ಬಗ್ಗೆ ಈಗಾಗಲೇ ಸರ್ಕಾರದಿಂದ ಏಳು ಕೋಟಿ ಬಿಡುಗಡೆಯಾಗಿದ್ದು, ಜುಲೈ ಅಂತ್ಯದೊಳಗೆ ನೈಟ್ ಲ್ಯಾಂಡಿಂಗ್ ಪ್ರಾರಂಭವಾಗಲಿದೆ. ತರಾತುರಿಯಲ್ಲಿ ಚುನಾವಣೆ ವೇಳೆಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದ ಅಂದಿನ ಬಿಜೆಪಿ ಸರ್ಕಾರಕ್ಕೆ ಈ ಎಲ್ಲಾ ಪೂರಕ ವ್ಯವಸ್ಥೆಗಳನ್ನು ಮಾಡಿ ಉದ್ಘಾಟನೆ ಮಾಡಬೇಕೆಂಬ ಪರಿಜ್ಞಾನ ಇರಲಿಲ್ಲವೇ ಎಂದು ಪ್ರಶ್ನಿಸಿದ ಯೋಗೀಶ್, ತಮ್ಮಿಂದಾದ ಎಲ್ಲಾ ತಪ್ಪುಗಳಿಗೆ ರಾಜ್ಯ ಸರ್ಕಾರವನ್ನು ಹೊಣೆಮಾಡಬೇಡಿ. ಅಪಪ್ರಚಾರ ಮಾಡಿ ಗೊಂದಲ ಸೃಷ್ಟಿಸಬೇಡಿ ಎಂದು ರಾಘವೇಂದ್ರಗೆ ಎಚ್ಚರಿಸಿದರು.
ಸೇತುವೆ ಮಂಜೂರಾತಿ ಜಟಾಪಟಿ:
ವಿದ್ಯಾನಗರದ ಶಿಥಿಲಗೊಂಡಿರುವ ತುಂಗಾ ಸೇತುವೆ ಕುರಿತು ೨೦೧೮ ರಿಂದಲೇ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಕಾಂಗ್ರೆಸ್ ವತಿಯಿಂದ ಮಾಡಲಾಗಿದೆ. ಅಂದಿನ ಹಾಗೂ ಹಾಲಿ ಲೋ ಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದು, ಅದರ ಪರಿಣಾಮವಾಗಿ ಸೇತುವೆ ಕಾಮಗಾರಿಗೆ ೪೦ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಸೇತುವೆ ಮಂಜೂರಾತಿಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಅವರ ಶ್ರಮವೂ ಇದೆ. ಆದರೆ ಅನುದಾನ ಬಿಡುಗಡೆಯಾದ ನಂತರವೂ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಶಾಸಕರು ಹೇಳುವುದು ವಿರೋಧಾಭಾಸ ಎಂದರು.
ರಾಜ್ಯದಲ್ಲಿ ಒಟ್ಟಿಗೆ ಸೇತುವೆಗಳಿಗೆ ೨೦೦೦ ಕೋಟಿ ರೂ. ಸರ್ಕಾರ ಬಜೆಟ್ ನಲ್ಲಿ ಕಾಯ್ದಿರಿಸಿದ್ದು ಶಿವಮೊಗ್ಗದ ಸೇತುವೆಗೆ ಪ್ರಾಧಾನ್ಯತೆ ನೀಡಲಾಗಿದೆ. ಕಳೆದ ಒಂದು ತಿಂಗಳಲ್ಲಿ ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಸುಮಾರು ೨೦೦ ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಬಿಡುಗಡೆಯಾಗಿದೆ. ಇದಕ್ಕೆ ಶಿಲಾನ್ಯಾಸ ಸಹ ಬಂಗಾರಪ್ಪ ಬಡಾವಣೆಯಲ್ಲಿ ಉಸ್ತುವಾರಿ ಸಚಿವರು ನೆರವೇರಿಸಿದ್ದರೂ ಶಾಸಕ ಚನ್ನಬಸಪ್ಪ ಪ್ರತಿ ಬಡಾವಣೆಗೆ ಹೋಗಿ ಶಿಲಾನ್ಯಾಸ ಮಾಡುತ್ತಿದ್ದಾರೆ.
೨ನೇ ಬಾರಿ ಗುದ್ದಲಿ ಪೂಜೆ ನೆರವೇರಿಸಿರುವ ಶಾಸಕರು ಈಗ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಶಾಸಕರು ಜನರಲ್ಲಿ ಈ ಸರ್ಕಾರದಿಂದ ಅಭಿವೃದ್ಧಿಯಾಗಿಲ್ಲ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸರ್ಕಾರದ ದುಡ್ಡು ಇವರಿಗೆ ಪ್ರಚಾರ, ಎಲ್ಲಾ ಕಾರ್ಯಕ್ರಮಗಳಲ್ಲೂ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದರು.


