ಶಿವಮೊಗ್ಗ, ಜಿಲ್ಲೆಯಲ್ಲಿ ತೀವ್ರವಾಗಿರುವ ಬೇಸಿಗೆಯ ಬಿಸಿಲಿನಿಂದಾಗಿ ಜಲಮೂಲಗಳು ಬತ್ತಿ ಹೋಗುತ್ತಿದ್ದು, ಮೂಕ ಪ್ರಾಣಿ-ಪಕ್ಷಿಗಳ ರಕ್ಷಣೆಗಾಗಿ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹ್ಯೂಮನ್ ರೈಟ್ಸ್ ಜಸ್ಟಿಸ್ ಕೌನ್ಸಿಲ್ (HRJC) ವತಿಯಿಂದ ಇಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಎನ್.ಎಂ. ಸಿಬ್ಗತುಲ್ಲಾ ರವರು ಈ ಸಂದರ್ಭದಲ್ಲಿ ಮಾತನಾಡಿ, ಜಿಲ್ಲಾಡಳಿತಕ್ಕೆ ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಸಲ್ಲಿಸಿದರು:
ಕೆರೆಗಳ ಸರ್ವೇ ಮತ್ತು ಒತ್ತುವರಿ ತೆರವು:
ಶಿವಮೊಗ್ಗ ನಗರದ ಊರುಗಡೂರು, ಮಂಡ್ಲಿ, ಹರಕೆರೆ, ಸೋಮಿನಕೊಪ್ಪ, ಪುರದಾಳು, ಅನಾಪಿನಕಟ್ಟೆ ಮತ್ತು ಅಲ್ಕೋಳ ಭಾಗದ ಕೆರೆಗಳು ವ್ಯಾಪಕವಾಗಿ ಒತ್ತುವರಿಯಾಗಿದ್ದು, ತಕ್ಷಣವೇ ಇವುಗಳನ್ನು ತೆರವುಗೊಳಿಸಿ ಹೂಳೆತ್ತಬೇಕು.


ಜಲಮೂಲಗಳ ಭರ್ತಿ:
ಜಿಲ್ಲೆಯ ಪ್ರಮುಖ ಕೆರೆಗಳಿಗೆ ಕಾಲುವೆ ಅಥವಾ ಟ್ಯಾಂಕರ್‌ಗಳ ಮೂಲಕ ನೀರು ತುಂಬಿಸಿ ವನ್ಯಜೀವಿಗಳನ್ನು ಸಂರಕ್ಷಿಸಬೇಕು.
‘ಜಲ ಕುಂಭ’ ಯೋಜನೆ:
ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ-ಪಕ್ಷಿಗಳಿಗಾಗಿ ನೀರಿನ ತೊಟ್ಟಿಗಳನ್ನು ಅಳವಡಿಸಬೇಕು.
ತುರ್ತು ಆಹಾರ ಕೇಂದ್ರ:
ಗಾಂಧಿ ಪಾರ್ಕ್, ಕೋಟಿ ಪರಿಸರ ಹಾಗೂ ಗಾಜನೂರು ಅರಣ್ಯದಂಚಿನ ಭಾಗಗಳಲ್ಲಿ ಆಹಾರ ಮತ್ತು ನೀರಿನ ಕೇಂದ್ರಗಳನ್ನು ಸ್ಥಾಪಿಸಬೇಕು.”ಪ್ರಾಣಿಗಳಿಗೆ ಕನಿಷ್ಠ ಸೌಕರ್ಯ ಒದಗಿಸುವುದು ಸಂವಿಧಾನದ ವಿಧಿ 51A(g) ಅಡಿಯಲ್ಲಿ ಸರ್ಕಾರದ ಜವಾಬ್ದಾರಿಯಾಗಿದೆ. ಒಂದು ವೇಳೆ ಈ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ, ಸಂಘಟನೆಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಿದೆ” ಎಂದು ಅವರು ಎಚ್ಚರಿಸಿದರು.
ಈ ಸಮಯದಲ್ಲಿ ಕರ್ನಾಟಕ ರಾಜ್ಯದ ಪದಾಧಿಕಾರಿಗಳಾದ ದೇವರಾಜ್ ಲೋಕೇಶ್ ಇನ್ನಿತರರು ಉಪಸ್ಥಿತರಿದ್ದರು.

