ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಆದಿಲ್ ಅಲಿಯಾಸ್ ರಯೀಸ್ ಹಾಗೂ ಆತನ ಸಹಚರರ ವಿರುದ್ಧ ದಬ್ಬಾಳಿಕೆ ಮತ್ತು ಹಣ ದೋಚಿದ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನಗರದ “ಮೊಬೈಲ್ ನ್ಯೂ ಮಂಡಳಿ” ಅಂಗಡಿ ಮಾಲೀಕ ಇಮ್ರಾನ್ ಖಾನ್ ಅವರ ಅಂಗಡಿಗೆ ಆರೋಪಿಗಳು ನೇರವಾಗಿ ನುಗ್ಗಿ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಗ್ಯಾಂಗ್‌ಸ್ಟರ್ ಶೈಲಿಯಲ್ಲಿ ಬೆದರಿಕೆ ಹಾಕಿ, ಅವರನ್ನು ಶಿವಮೊಗ್ಗ ಹೊರವಲಯದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಕರೆದೊಯ್ದಿರುವ ಮಾಹಿತಿ ಲಭ್ಯವಾಗಿದೆ.
ಅಲ್ಲದೆ, ಇಮ್ರಾನ್ ಖಾನ್ ಅವರ ಎಟಿಎಂ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು ಫೋನ್‌ಪೇ ಮುಖಾಂತರ ಸುಮಾರು ₹1 ಲಕ್ಷ ಹಣ ಡ್ರಾ ಮಾಡಿಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ವೇಳೆ ಜೀವ ಬೆದರಿಕೆಯನ್ನೂ ಹಾಕಲಾಗಿದೆ ಎಂದು ಹೇಳಲಾಗಿದೆ.ಪ್ರಕರಣ ದಾಖಲಾದ ತಕ್ಷಣವೇ ದೊಡ್ಡಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿ ರೌಡಿಶೀಟರ್ ಆದಿಲ್ ಅಲಿಯಾಸ್ ರಯೀಸ್ ಮತ್ತು ಆತನ ಮತ್ತೊಬ್ಬ ಸಹಚರನನ್ನು ಬಂಧಿಸಿದ್ದಾರೆ.
ಬಂಧಿತರಿಂದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದ್ದು, ಈ ಕೃತ್ಯದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

