ಶಿವಮೊಗ್ಗ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಮೂಲಭೂತ ಸೌಕರ್ಯಗಳನ್ನು ನೀಡುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸುತ್ತಿದ್ದು ಪ್ರತಿ ಮಹಾನಗರಪಾಲಿಕೆಗಳ ಅಭಿವೃದ್ಧಿ ಯೋಜನೆಗಳಿಗೆ ನಗರಾಭಿವೃದ್ದಿ ಇಲಾಖೆಯು ರೂ.2೦೦ ಕೋಟಿ ಮಂಜೂರು ಮಾಡಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್. ಸುರೇಶ್ ತಿಳಿಸಿದರು.
ಬೊಮ್ಮನಕಟ್ಟೆ ‘ಬಿ’ ಬ್ಲಾಕ್ ನಲ್ಲಿ ಶಿವಮೊಗ್ಗ ಮಹಾನಗರಪಾಲಿಕೆಯ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ (ಹಂತ-2), ಎನ್.ಜಿ.ಟಿ. ಅನುದಾನದ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಬೊಮ್ಮನಕಟ್ಟೆ ಆಶ್ರಯ ಬಡಾವಣೆಗೆ ಮಾಜಿ ಮುಖ್ಯಮಂತ್ರಿ ದಿ|| ಶ್ರೀ ಎಸ್. ಬಂಗಾರಪ್ಪ ಬಡಾವಣೆಯ ನಾಮಕರಣ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ (ಹಂತ-2) ಯಡಿ ಸುಮಾರು ರೂ. ೧೨೭.೫ ಕೋಟಿ ವೆಚ್ಚದ ಕಾಮಗಾರಿಗೆ ಇಂದು ಚಾಲನೆ ನೀಡಿದ್ದು ಮುಂದಿನ 2೦ ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ನಗರದ ಕುಡಿಯುವ ನೀರಿನ ಯೋಜನೆ ಕುರಿತು ಸಚಿವರು, ಶಾಸಕ ರೊಂದಿಗೆ ಚರ್ಚಿಸಿ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಹಂತ ಹಂತವಾಗಿ ಹಣ ಮಂಜೂರು ಮಾಡುವ ಮೂಲಕ ಯೋಜನೆಯನ್ನು ಸಾಕಾರಗೊಳಿಸಲು ಕಟಿಬದ್ದರಾಗಿದ್ದೇವೆ. ಪೌರ ಕಾರ್ಮಿಕರ ವಸತಿ ಯೋಜನೆಯಡಿ ಬಾಕಿ ಕಾಮಗಾರಿಗೆ ಅಗತ್ಯವಾದ ಅನುದಾನ ಕೊಡಿಸಲು ಭರವಸೆ ನೀಡಿದರು.
ರಾಜ್ಯದಲ್ಲಿ ನಗರಾಭಿವೃದ್ದಿ ಇಲಾಖೆಯಿಂದ ನಗರ, ಪಟ್ಟಣ, ಪಾಲಿಕೆಗಳಿಗೆ ಕುಡಿಯುವ ನೀರಿಗಾಗಿ ರೂ. ೨೫ ಸಾವಿರ ಕೋಟಿ ನೀಡಲಾಗಿದೆ. ೭೦% ನಗರಗಳಿಗೆ ಕುಡಿಯುವ ನೀರು ಮತ್ತು ಯುಜಿಡಿ ವ್ಯವಸ್ಥೆ ಮಾಡಲಾಗುತ್ತಿದೆ.
ಅಂದಿನ ಅಹಿಂದ ಪರವಾದ ನಾಯಕ ಬಂಗಾರಪ್ಪನವರನ್ನು ನೋಡಿ ಬೆಳೆದ ನಮಗೆಲ್ಲ ಅವರು ಆದರ್ಶ ವ್ಯಕ್ತಿ. ಅವರ ಕಾರ್ಯಕ್ರಮ ನೋಡಿಯೇ ರಾಜಕಾರಣಕ್ಕೆ ಪ್ರವೇಶಿಸಿದ್ದೇನೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುತ್ತಿದ್ದೇನೆ.
ಗ್ಯಾರಂಟಿ ಯೋಜನೆಗಳೊಂದಿಗೆ ಇತರೆ ಅಭಿವೃದ್ದಿ ಯೋಜನೆಗಳಿಗೆ ಹಣ ನೀಡುತ್ತಿದೆ. ಸರ್ಕಾರ ಸ್ಮಾರ್ಟ್ ಸಿಟಿಗೆ ಶೇ.೫೦ ರಷ್ಟು ಹಣ ನೀಡಿದೆ. ಯುಬಿಐಡಿ ಪ್ರಕಾರ ಪ್ರತಿ ತಿಂಗಳು ಜೀವನ ನಡೆಸಲು ಅಗತ್ಯವಾದ ಆರ್ಥಿಕ ಸಹಾಯ ಒದಗಿಸುತ್ತಿರುವ ಸರ್ಕಾರ ಇಡೀ ಪ್ರಪಂಚದಲ್ಲೇ ನಮ್ಮದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಮಧು ಬಂಗಾರಪ್ಪ, ವೇಗವಾಗಿ ಬೆಳೆಯುತ್ತಿರುವ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರಿಗೆ ಸಂಬಂಧಿಸಿದಂತೆ ವ್ಯವಸ್ಥಿತವಾದ ಕ್ರಿಯಾ ಯೋಜನೆ ಸಿದ್ದಪಡಿಸಿದ್ದು, ಈ ಯೋಜನೆಯನ್ನು ಮಂಜೂರು ಮಾಡಬೇಕೆಂದು ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡಿದರು.
ಶಾಸಕರಾದ ಗೋಪಾಲಕೃಷ್ಣ ಬೇಳೂರು, ಶಾರದಾ ಪೂರ್ಯಾ ನಾಯ್ಕ್, ಬಲ್ಕೀಶ್ ಬಾನು, ವಿಧಾನ ಪರಿಷತ್ ಶಾಸಕ ಡಿ.ಎಸ್ ಅರುಣ್, ಬಲ್ಕಿಸ್ ಬಾನು ರಾಜ್ಯ ಜವಳಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ, ರಾಜ್ಯ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ,ಜಿಲ್ಲಾಧಿಕಾರಿಗಳಾದ ಹೇಮಂತ್ ಎನ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್, ಎಡಿಸಿ ಅಭಿಷೇಕ್ ವಿ, ಡಿಯುಡಿಸಿ ಯೋಜನಾ ನಿರ್ದೇಶಕ ರಂಗಸ್ವಾಮಿ, ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಕೆ, ಇತರರು ಹಾಜರಿದ್ದರು.

