ಶಿವಮೊಗ್ಗ, ಅಕ್ರಮವಾಗಿ ಕಾಡು ಪ್ರಾಣಿಗಳ ಬೇಟೆಗೆ ಬಳಸುತ್ತಿದ್ದ 45 ನಾಡ ಬಾಂಬ್ಗಳನ್ನು ಜಿಲ್ಲೆಯ ಹೊಸನಗರ ವಲಯ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಒಬ್ಬನನ್ನು ಬಂಧಿಸಲಾಗಿದೆ.
ಎಪ್ರಿಲ್ 19ರಂದು ಹೊಸನಗರ ತಾಲೂಕು ಕೆರೆಹಳ್ಳಿ ಹೋಬಳಿಯ ಹರತಾಳು ಗ್ರಾಮದ ಬಳಿ ಕೋಟೆತಾರಿಗದಿಂದ ಹರತಾಳು ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಪಕ್ಕದ ಮೀಸಲು ಅರಣ್ಯದಲ್ಲಿ ಕಾಡು ಪ್ರಾಣಿಗಳ ಬೇಟೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಹೊಸನಗರ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ.
ಅರಣ್ಯಾಧಿಕಾರಿಗಳ ದಾಳಿ ವೇಳೆ, ಡಾಕಪ್ಪ(55), ಭಾಸ್ಕರ (55) ಹಾಗೂ ನಾಗರಾಜ್ (53) ಎಂಬುವರು ನಾಡ ಬಾಂಬ್ ಇಟ್ಟು ಶಿಕಾರಿಗೆ ಹೊಂಚು ಹಾಕುತ್ತಿರುವುದು ಕಂಡುಬಂದಿದೆ.
ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ, ಭಾಸ್ಕರ್ ಹಾಗೂ ನಾಗರಾಜ್ ಪರಾರಿಯಾಗಿದ್ದು, ಡಾಕಪ್ಪನನ್ನು ಬಂಧಿಸಲಾಗಿದೆ. ಈ ವೇಳೆ 45 ನಾಡ ಬಾಂಬ್ಗಳ ಜೊತೆಗೆ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಾಕಪ್ಪನನ್ನು ಹೊಸನಗರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಪರಾರಿಯಾಗಿರುವ ಇಬ್ಬರು ಆರೋಪಿಗಳಾದ ಭಾಸ್ಕರ್ ಹಾಗೂ ನಾಗರಾಜ್ ಹುಡುಕಾಟಕ್ಕೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.
ಕಾರ್ಯಾಚರಣೆಯಲ್ಲಿ ಹೊಸನಗರ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಎಸ್., ಉಪ ವಲಯ ಅರಣ್ಯಾಧಿಕಾರಿಗಳಾದ ಅನಿಲ್ ಬೆಳ್ಳೆನವರ್, ಭರತ್ ಕುಮಾರ್, ಗಸ್ತು ಅರಣ್ಯ ಪಾಲಕ ಮಂಜುನಾಥ ಡಿ., ಪ್ರಶಾಂತ ಜಿ., ಪುಟ್ಟಸ್ವಾಮಿ ಕೆ.ವಿ., ಗಸ್ತು ಅರಣ್ಯ ಪಾಲಕರು ಹಾಗೂ ಇಲಾಖೆಯ ಇತರ ಸಿಬ್ಬಂದಿ ಪಾಲ್ಗೊಂಡಿದ್ದರು.


