ಶಿವಮೊಗ್ಗ | ತಕ್ಷಣವೇ ಎಂ ಎಲ್ ಸಿ ಹುದ್ದೆಯಿಂದ ಸಿ.ಟಿ. ರವಿ ಅವರನ್ನು ವಜಾಗೊಳಿಸಿ : ರಿಯಾಜ್ ಅಹಮದ್

ಶಿವಮೊಗ್ಗ

ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಕೆಲವು ಬಿಜೆಪಿಯ ಘಟಾನುಘಟಿ ರಾಜಕೀಯ ನಾಯಕರಿಂದ ಸಾರ್ವಜನಿಕ ವೇದಿಕೆಗಳಲ್ಲಿ ಧರ್ಮಾಧಾರಿತ ಹಾಗೂ ಪ್ರಚೋದನಕಾರಿ ಎಂದು ವ್ಯಾಪಕ ಟೀಕೆಗೆ ಒಳಗಾಗಿರುವ ಹೇಳಿಕೆಗಳು ದೇಶದ ಸಾಮಾಜಿಕ ಸಾಮರಸ್ಯಕ್ಕೆ ಗಂಭೀರ ಆತಂಕವನ್ನುಂಟು ಮಾಡುತ್ತಿವೆ ಎಂದು ಶಿವಮೊಗ್ಗ ಪೀಸ್ ಆರ್ಗನೈಸೇಷನ್ ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ‌ನೀಡಿದ ಸಂಘಟನೆಯ ಅಧ್ಯಕ್ಷ ರಿಯಾಜ್ ಅಹಮದ್, ಬಿಜೆಪಿ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ ಅವರ ಪ್ರತಾಪ್ ಸಿಂಹ ರವರ ಮತ್ತು ಬಿ.ವೈ ವಿಜಯೇಂದ್ರ ರವರ ಹಾಗೂ ಕೇಂದ್ರ ರಾಜಕೀಯ ನಾಯಕರ ಹೇಳಿಕೆಗಳು ಅನೇಕ ನಾಗರಿಕರಲ್ಲಿ ಮತ್ತು ಮುಸ್ಲಿಂ ಸಮುದಾಯದಲ್ಲಿ ನೋವು, ಆತಂಕ ಹಾಗೂ ಅಸಮಾಧಾನವನ್ನು ಉಂಟುಮಾಡಿವೆ.

ಇಂತಹ ಹೇಳಿಕೆಗಳು ಸಮಾಜದಲ್ಲಿ ಪರಸ್ಪರ ವಿಶ್ವಾಸವನ್ನು ಕುಂದಿಸಿ, ಧರ್ಮಗಳ ನಡುವೆ ಅನಗತ್ಯ ಉದ್ವಿಗ್ನತೆ ಉಂಟುಮಾಡುವ ಸಾಧ್ಯತೆ ಇದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದರು.

ಭಾರತವು ಸಂವಿಧಾನದ ಆಶಯಗಳಾದ ಸಮಾನತೆ, ಸಹಬಾಳ್ವೆ, ಸಹೋದರತ್ವ ಮತ್ತು ಧಾರ್ಮಿಕ ಸ್ವಾತಂತ್ರ್ಯದ ತತ್ವಗಳ ಮೇಲೆ ನಿರ್ಮಾಣಗೊಂಡ ರಾಷ್ಟ್ರವಾಗಿದೆ. ರಾಜಕೀಯ ನಾಯಕರು ಜನರನ್ನು ಒಂದುಗೂಡಿಸುವ ಜವಾಬ್ದಾರಿ ಹೊಂದಿದ್ದು, ಯಾವುದೇ ಸಮುದಾಯವನ್ನು ನೋಯಿಸುವ ಅಥವಾ ವಿಭಜನೆಗೆ ಕಾರಣವಾಗುವ ರೀತಿಯ ಭಾಷೆಯನ್ನು ಬಳಸಬಾರದು.

ಇಂತಹ ವಿವಾದಾತ್ಮಕ ಹೇಳಿಕೆಗಳ ಕುರಿತು ಸ್ಪಷ್ಟ ನಿಲುವು ಪ್ರಕಟಿಸಿ, ಸಿ.ಟಿ. ರವಿ ಅವರನ್ನು ಅವರ ಹುದ್ದೆಯಿಂದ ವಜಾಗೊಳಿಸುವುದು ಸೇರಿದಂತೆ ಸೂಕ್ತ ಶಿಸ್ತು ಕ್ರಮಗಳನ್ನು ಪರಿಗಣಿಸಬೇಕು ಎಂದು ಹೇಳಿದರು.

ಧರ್ಮ, ಜಾತಿ ಅಥವಾ ಭಾಷೆಯ ಹೆಸರಿನಲ್ಲಿ ಜನರನ್ನು ವಿಭಜಿಸುವ ರಾಜಕಾರಣವನ್ನು ತೊರೆದು, ಭಾರತದ ಏಕತೆ, ಸೌಹಾರ್ದತೆ ಮತ್ತು ಸಂವಿಧಾನದ ಮೌಲ್ಯಗಳನ್ನು ಬಲಪಡಿಸುವ ರಾಜಕೀಯವನ್ನು ಅನುಸರಿಸಬೇಕೆಂದು ಆಗ್ರಹಿಸಿದರು.

ದ್ವೇಷದ ಭಾಷೆ ದೇಶವನ್ನು ಬಲಪಡಿಸುವುದಿಲ್ಲ; ಪ್ರೀತಿ, ಪರಸ್ಪರ ಗೌರವ ಮತ್ತು ಸಂವಿಧಾನದ ಮೇಲಿನ ನಂಬಿಕೆಯೇ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡುತ್ತದೆ ಎಂದರು.

Author