ಶಿವಮೊಗ್ಗ, ಹಿಂದಿನಿಂದ ನಡೆದುಕೊಂಡು ಬಂದ ಬಣ ರಾಜಕೀಯ ನನಗೆ ಬೇಡ. ನಾನು ಬಂದ ಮೇಲೆ ಬಣ ರಾಜಕೀಯ ಕಡಿಮೆಯಾಗಬೇಕು” ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಸಿ ಯೋಗೀಶ್ ಹೇಳಿದರು.ತಮ್ಮ ಪ್ರಥಮ ಸುದ್ದಿ ಗೋಷ್ಟಿಯಲ್ಲಿ ಮಾತನಾದಿದ ಅವರು, ಯಾರೂ ಬಣ ರಾಜಕೀಯ ಮಾಡಬಾರದು ಎಂಬ ನಿರ್ದೇಶನವಿದ್ದು, ಕೆಪಿಸಿಸಿ ಅಧ್ಯಕ್ಷರು ನೀಡುವ ನಿರ್ದೇಶನದಂತೆ ತಾವು ನಡೆದುಕೊಳ್ಳುವುದಾಗಿ ಹೇಳಿದರು.
ಪ್ರತ್ಯೇಕವಾಗಿ ಕಾರ್ಯಕ್ರಮಗಳನ್ನು ನಡೆಸುವುದನ್ನು ಅವರು ಅಧಿಕಾರದ ವಿಕೇಂದ್ರೀಕರಣದ ರೀತಿಯಲ್ಲಿ ವಿವರಿಸಿದರು. 25 ಹಳ್ಳಿಗಳಲ್ಲಿ ಒಬ್ಬರು ಕಾರ್ಯಕ್ರಮ ನಡೆಸಿದರೆ, ಮತ್ತೊಂದು 25 ಹಳ್ಳಿಗಳಲ್ಲಿ ಮತ್ತೊಬ್ಬರು ಕಾರ್ಯಕ್ರಮ ನಡೆಸಬಹುದು. ಬಳಿಕ ಎಲ್ಲರೂ ಒಟ್ಟಾಗಿ ಸೇರಿ ಡಿ.ಕೆ. ಶಿವಕುಮಾರ್ ಅವರ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ರೀತಿಯಲ್ಲಿ ಕಾರ್ಯನಿರ್ವಹಿಸಬಹುದು ಎಂದರು.
ಮುಂದಿನ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಕೆಲವರು ತಾವೇ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯೋಗೀಶ್, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ತಮ್ಮ ಆಸೆಯನ್ನು ವ್ಯಕ್ತಪಡಿಸುವ ಹಕ್ಕಿದೆ ಎಂದರು.ಆದರೆ ಅಭ್ಯರ್ಥಿಯನ್ನು ಅಂತಿಮವಾಗಿ ಪಕ್ಷವೇ ನಿರ್ಧರಿಸುತ್ತದೆ ಎಂಬುದನ್ನು ಅವರು ಸ್ಪಷ್ಟಪಡಿಸಿದರು. ಪಕ್ಷದ ಜಿಲ್ಲಾ ಅಧ್ಯಕ್ಷರಾಗಿ ತಮಗೆ ನೀಡಿರುವ ಜವಾಬ್ದಾರಿಯನ್ನೂ ಇದೇ ಹಿನ್ನೆಲೆಯಲ್ಲಿ ನಿರ್ವಹಿಸುವುದಾಗಿ ಹೇಳಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಕುರಿತು ವಿವರಿಸಿದ ಯೋಗೀಶ್, ‘ಸಂಘಟನಾ ಸೃಜನ್ ಅಭಿಯಾನ’ದಡಿ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳ ರಾಜಕೀಯ ಹಿನ್ನೆಲೆ, ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ವಿವರ, ಬೇರೆ ಪಕ್ಷಕ್ಕೆ ತೆರಳಿದ್ದಾರೆಯೇ, ಬೇರೆ ಸಂಘಟನೆಗಳೊಂದಿಗೆ ಸಂಪರ್ಕ, ಯಾರ ಬೆಂಬಲವಿದೆ, ಮುಂದಿನ ಉದ್ದೇಶಗಳೇನು ಹಾಗೂ ಕಾಂಗ್ರೆಸ್ ಪಕ್ಷ ಏಕೆ ಅವಕಾಶ ನೀಡಬೇಕು ಎಂಬುದೂ ಸೇರಿದಂತೆ ಹಲವು ಪ್ರಶ್ನೆಗಳನ್ನು ಒಳಗೊಂಡ ಅರ್ಜಿ ನೀಡಲಾಗಿತ್ತು ಎಂದರು.
ಹಲವರು ಅರ್ಜಿ ಸಲ್ಲಿಸಿದ್ದರೂ ಒಬ್ಬರಿಗೆ ಮಾತ್ರ ಅವಕಾಶ ದೊರೆಯುತ್ತದೆ. ತಮ್ಮೊಂದಿಗೆ ಅರ್ಜಿ ಸಲ್ಲಿಸಿದ್ದವರೆಲ್ಲರೂ ಕಾಂಗ್ರೆಸ್ ಪಕ್ಷದವರೇ ಆಗಿದ್ದು, ಅವರ ಸಹಕಾರದೊಂದಿಗೆ ಮುಂದೆ ಸಾಗುವುದಾಗಿ ಹೇಳಿದರು.“ನೀವು ನಮ್ಮ ಜೊತೆಗಿರಿ, ನಾನು ಕೂಡ ನಿಮ್ಮ ಜೊತೆಗೆ ಇರ್ತೀನಿ” ಎಂದು ಪಕ್ಷದ ಇತರ ಆಕಾಂಕ್ಷಿಗಳಿಗೆ ಯೋಗೀಶ್ ಮನವಿ ಮಾಡಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಘಟನೆ ಸಜ್ಜು :
ಇತ್ತೀಚೆಗೆ ರಾಷ್ಟ್ರೀಯ ನಾಯಕರು, ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆ ನಡೆಸಿ, ಬ್ಲಾಕ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವುದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಲು ಸಿದ್ಧತೆ, ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವುದು ಹಾಗೂ ಭಾರತ್ ಜೋಡೋ ಕಾರ್ಯಕ್ರಮಗಳನ್ನು ಸಂಘಟಿಸುವ ಕುರಿತು ಚರ್ಚಿಸಿದ್ದಾರೆ ಎಂದು ಯೋಗೀಶ್ ತಿಳಿಸಿದರು.ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಶಾಸಕರು, ಸಚಿವರು, ಮಾಜಿ ಅಭ್ಯರ್ಥಿಗಳು ಹಾಗೂ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಬೆಳೆಯಲಿರುವ ನಾಯಕರನ್ನು ಒಟ್ಟಾಗಿ ಕರೆದೊಯ್ಯುವ ಜವಾಬ್ದಾರಿ ನೀಡಲಾಗಿದೆ ಎಂದರು.
ಜಿಲ್ಲಾ ನಾಯಕರಾದ ಮಧು ಬಂಗಾರಪ್ಪ, ಬಿ.ಕೆ. ಸಂಗಮೇಶ್ವರ್, ಬೇಳೂರು ಗೋಪಾಲಕೃಷ್ಣ, ಬಲ್ಕೀಸ್ ಬಾನು ಹಾಗೂ ಸೋತ ಅಭ್ಯರ್ಥಿಗಳಾದ ಶ್ರೀನಿವಾಸ್ ಕರಿಯಣ್ಣ, ಕಿಮ್ಮನೆ ರತ್ನಾಕರ್, ಗೋಣಿ ಮಂಜುನಾಥೇಶ್ವರ್ ಸೇರಿದಂತೆ ಎಲ್ಲರ ಸಹಕಾರದೊಂದಿಗೆ ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕಾರ್ಯಕರ್ತರನ್ನು ಸಂಘಟಿಸುವುದಾಗಿ ಹೇಳಿದರು.ಯುವ ಕಾಂಗ್ರೆಸ್‌ನ ಲೋಕಸಭಾ ಅಧ್ಯಕ್ಷರಾಗಿ ಈ ಹಿಂದೆ ಏಳು ವಿಧಾನಸಭಾ ಕ್ಷೇತ್ರಗಳ ಜೊತೆಗೆ ಬೈಂದೂರು ಕ್ಷೇತ್ರದಲ್ಲಿಯೂ ಎರಡು ವರ್ಷ ಕೆಲಸ ಮಾಡಿದ್ದೇನೆ. ಆ ಕೆಲಸವನ್ನು ಗಮನಿಸಿ ರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ನೀಡಲಾಗಿತ್ತು. ಆದ್ದರಿಂದ ಪಕ್ಷದ ಸಂಘಟನೆ ತಮಗೆ ಹೊಸದಲ್ಲ. ಆದರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜವಾಬ್ದಾರಿ ಹೊಸದಾಗಿದ್ದು, ಅದನ್ನು ಸಮರ್ಥವಾಗಿ ನಿರ್ವಹಿಸುವ ವಿಶ್ವಾಸವಿದೆ ಎಂದು ಹೇಳಿದರು.
ನಾಳೆ ಸಿಎಂ ರೈತರೊಂದಿಗೆ ಸಂವಾದ: 20–25 ಸಾವಿರ ರೈತರ ನಿರೀಕ್ಷೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ. 19ರಂದು ಶಿವಮೊಗ್ಗ ಜಿಲ್ಲೆಗೆ ಆಗಮಿಸಿ ಕಸ್ತೂರಿರಂಗನ್ ವರದಿಯಿಂದ ಆತಂಕಕ್ಕೊಳಗಾಗಿರುವ ರೈತರೊಂದಿಗೆ ಸಂವಾದ ನಡೆಸಿ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಯೋಗೀಶ್ ಹೇಳಿದರು.ಈ ಕಾರ್ಯಕ್ರಮಕ್ಕೆ ಸುಮಾರು 20ರಿಂದ 25 ಸಾವಿರ ರೈತರನ್ನು ಸೇರಿಸುವ ಗುರಿ ಹೊಂದಲಾಗಿದೆ. ಇದು ಸರ್ಕಾರಿ ಕಾರ್ಯಕ್ರಮವಾಗಿದ್ದರೂ, ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ವ್ಯಾಪ್ತಿಯ ರೈತರನ್ನು ಕರೆತರುವ ವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.
ಸೆಪ್ಟೆಂಬರ್ 21ರಂದು ಕಸ್ತೂರಿರಂಗನ್ ವರದಿ ವಿಚಾರವಾಗಿ ವಿಶೇಷ ಅಧಿವೇಶನ ನಡೆಯಲಿದೆ ಎಂದು ಯೋಗೀಶ್ ತಿಳಿಸಿದರು. ಸೆಪ್ಟೆಂಬರ್ 22 ಮತ್ತು 23ರಂದು ಕರ್ನಾಟಕದ ಬರ ಪರಿಸ್ಥಿತಿ ಹಾಗೂ ರೈತರ ಸಮಸ್ಯೆಗಳ ಕುರಿತು ಅಧಿವೇಶನ ನಡೆಯಲಿದೆ ಎಂದರು.ಶಿವಮೊಗ್ಗ, ತೀರ್ಥಹಳ್ಳಿ ಭಾಗಗಳಲ್ಲಿ ವರದಿಯ ಪರಿಣಾಮ ಹೆಚ್ಚಿದ್ದು, ಶಿಕಾರಿಪುರದ ಕೆಲವು ಭಾಗಗಳಲ್ಲಿಯೂ ರೈತರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಹೊಸನಗರ ಸೇರಿದಂತೆ ವಿವಿಧ ಭಾಗಗಳಿಂದಲೂ ರೈತರನ್ನು ಕರೆತರಲಾಗುತ್ತಿದೆ ಎಂದರು.
ಸೆ. 19ರ ಮುಖ್ಯಮಂತ್ರಿ ಅವರ ರೈತರೊಂದಿಗಿನ ಸಂವಾದ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಯೋಗೀಶ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕಲಗೋಡು ರತ್ನಾಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಕುಮಾರ್, ಕಲೀಂ ಪಾಷಾ, ದೇವೇಂದ್ರಪ್ಪ, ಶಿಕಾರಿಪುರ ಪ್ರವೀಣ್, ನಗರ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್, ಮಹಿಳಾ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷೆ ಶ್ವೇತಾ ಬಂಡಿ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್, ವಿಶ್ವನಾಥ್ ಕಾಶಿ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮಹೇಶ್, ಎಸ್‌ಸಿ ಘಟಕದ ಅಧ್ಯಕ್ಷ ಶಿವಣ್ಣ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಧು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.





