ಶಿವಮೊಗ್ಗ,ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆಯಿಂದ ಮಲೆನಾಡು ಹಾಗೂ ಗ್ರಾಮೀಣ ಪ್ರದೇಶದ ರೈತರು, ಕೃಷಿ ಕಾರ್ಮಿಕರು ಮತ್ತು ಮೂಲ ಅರಣ್ಯ ನಿವಾಸಿಗಳಲ್ಲಿ ಆತಂಕ ಉಂಟಾಗಿದೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲಾ ಜನತಾದಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಜಿಲ್ಲಾಧ್ಯಕ್ಷ ಕೆ.ಎನ್. ರಾಮಕೃಷ್ಣ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕಸ್ತೂರಿ ರಂಗನ್ ವರದಿ ಜಾರಿಯಿಂದ ಮಲೆನಾಡಿನ ತಲೆತಲಾಂತರಗಳಿಂದ ಕೃಷಿ ಮಾಡಿಕೊಂಡು ಬದುಕುತ್ತಿರುವ ರೈತರ ಜೀವನೋಪಾಯಕ್ಕೆ ತೊಂದರೆಯಾಗುವ ಆತಂಕವಿದೆ. ಆದ್ದರಿಂದ ರಾಜ್ಯ ಸರ್ಕಾರವು ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ನಿರ್ಣಯ ಕೈಗೊಂಡು, ಕೇಂದ್ರ ಸರ್ಕಾರದ ಅಧಿಸೂಚನೆಯನ್ನು ಹಿಂಪಡೆಯುವಂತೆ ಒತ್ತಾಯಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರ, ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರ ಮತ್ತು ಸೊರಬ ತಾಲೂಕುಗಳ ವ್ಯಾಪ್ತಿಯಲ್ಲಿ ವರದಿಯಿಂದ ಪರಿಣಾಮ ಬೀರುವ ಪ್ರದೇಶಗಳ ಕುರಿತು ಸ್ಪಷ್ಟತೆ ನೀಡಬೇಕು. ಅರಣ್ಯ ಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿ ಭೌತಿಕ ಸಮೀಕ್ಷೆ ನಡೆಸಿ, ವಾಸ್ತವಿಕ ಭೂ ಬಳಕೆ, ಕೃಷಿ ಪ್ರದೇಶ, ಜನವಸತಿ ಮತ್ತು ಅರಣ್ಯ ಪ್ರದೇಶಗಳ ಸ್ಥಿತಿಗತಿಗಳನ್ನು ಪರಿಶೀಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮಲೆನಾಡು ಮತ್ತು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಜನರ ಜೀವನೋಪಾಯ ಮತ್ತು ಪರಿಸರ ಸಂರಕ್ಷಣೆ ಎರಡನ್ನೂ ಸಮನ್ವಯಗೊಳಿಸುವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಒತ್ತಾಯ :
ಮುಂಗಾರು ಮಳೆಯ ಕೊರತೆಯಿಂದ ಶಿವಮೊಗ್ಗ ಜಿಲ್ಲೆಯ ಹಲವು ಭಾಗಗಳಲ್ಲಿ ಕೃಷಿ ಚಟುವಟಿಕೆಗಳು ತೀವ್ರವಾಗಿ ಹಾನಿಗೊಳಗಾಗಿವೆ. ಕೆಲವೆಡೆ ಬಿತ್ತನೆಯೇ ಆಗಿಲ್ಲ ಹಾಗೂ ಬಿತ್ತನೆಯಾದ ಪ್ರದೇಶಗಳಲ್ಲಿಯೂ ಬೆಳೆ ಹಾನಿಯಾಗಿದೆ ಎಂದು ಜನತಾದಳ ಮುಖಂಡರು ಹೇಳಿದರು.ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ತಕ್ಷಣ ವಿಶೇಷ ಬರಪರಿಹಾರ ಮತ್ತು ಆರ್ಥಿಕ ನೆರವು ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕೆಪಿಎಸ್‌ಸಿ ನೇಮಕಾತಿ ಅಕ್ರಮ: ಸಿಬಿಐ ತನಿಖೆಗೆ ಆಗ್ರಹ :
ಇತ್ತೀಚಿನ ಪಶುವೈದ್ಯಾಧಿಕಾರಿ ಸೇರಿದಂತೆ ವಿವಿಧ ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಜನತಾದಳ ಮುಖಂಡರು ಆಗ್ರಹಿಸಿದರು.ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುವ ಅಗತ್ಯವಿದ್ದು, ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷ ಕೆ.ಎನ್. ರಾಮಕೃಷ್ಣ, ಶಾಸಕರಾದ ಶಾರದಾ ಪೂರ್ಯ ನಾಯಕ್, ಮಾಜಿ ಶಾಸಕ ಕೆ.ವಿ. ಪ್ರಸನ್ನ ಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಗೀತಾ ಸತೀಶ್, ಶ್ರೀ ಸತೀಶ್,ಶಾರದಾ ಅಪ್ಪಾಜಿಗೌಡ, ಕಡಿದಾಳ್ ಗೋಪಾಲ್, ದಾದಾಪೀರ್, ನರಸಿಂಹ, ಗಂಧದಮನೆ ದೀಪಕ್ ಸಿಂಗ್ ಸೇರಿದಂತೆ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.





