ಶಿವಮೊಗ್ಗ ಜಿಲ್ಲೆ ಇವತ್ತು ಎರಡು ರಾಜಕೀಯ ಪಕ್ಷಗಳ ನಡುವಿನ ಹೈಡ್ರಾಮಾಗೆ ಸಾಕ್ಷಿಯಾಯಿತು. ಇಂದು ಬೆಳಿಗ್ಗೆ ನೀಟ್ ಅಕ್ರಮ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ್ದರೆ, ಅದಕ್ಕೆ ಪ್ರತಿಯಾಗಿ ಮಧ್ಯಾಹ್ನ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಕೌಂಟರ್ ಕೊಟ್ಟರು.
ಇಂದು ಬೆಳಿಗ್ಗೆ ಕಾಂಗ್ರೆಸ್ ಕಾರ್ಯಕರ್ತರು ನೀಟ್ ಅಕ್ರಮ ವಿರೋಧಿಸಿ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು.

ನಂತರ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ್ದು, ತಳ್ಳಾಟ ನೂಕಾಟ ಸೇರಿದಂತೆ ಕೊನೆಗೆ ಪೊಲೀಸ್ ಜೀಪ್ ಮೇಲೆ ಹತ್ತಿ ಆಕ್ರೊಶ ಹೊರಹಾಕುವ ಹಂತಕ್ಕೆ ಪ್ರತಿಭಟನೆ ತಲುಪಿತು. ಕೊನೆಗೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಇಷ್ಟಕ್ಕೆ ಮುಗಿಯಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯನ್ನು ಬಿಜೆಪಿ ಕಾರ್ಯಕರ್ತರು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅಷ್ಟೇ ಅಲ್ಲದೆ ಪ್ರತಿಭಟನೆ ವಿಚಾರವಾಗಿ ಎಸ್‌ಪಿ ಕಚೇರಿಗೆ ಮನವಿಯನ್ನು ಸಲ್ಲಿಸಿದ್ದರು.

ಮನವಿ ಸಲ್ಲಿಸಿದ ನಂತರ, ಬೆಳಿಗ್ಗೆ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಮುತ್ತಿಗೆಗೆ ಕೌಂಟರ್ ಕೊಡಲು ಬಿಜೆಪಿ ಕಾರ್ಯಕರ್ತರು ಬಿಜೆಪಿ ಜಿಲ್ಲಾಧ್ಯಕ್ಷ ಎಲ್. ಜಗದೀಶ್ ನೇತೃತ್ವದಲ್ಲಿ ಸಿದ್ಧರಾದರು. ಅಷ್ಟೇ ಅಲ್ಲದೆ, ಕಾಂಗ್ರೆಸ್ ಕಚೇರಿಯ ಎದುರಿದ್ದ ಬ್ಯಾನರ್‌ಗಳನ್ನು ಹರಿದ ಕಾರ್ಯಕರ್ತರು ನೇರವಾಗಿ ಕಾಂಗ್ರೆಸ್ ಕಚೇರಿಯ ಮೇಲೆ ಮೊಟ್ಟೆಯನ್ನು ತೂರಿದರು.

ಆದರೆ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಚೇರಿಯ ಸುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಬೆಳಿಗ್ಗೆ ಹಾಗೂ ಮಧ್ಯಾಹ್ನ ಎರಡು ಪಕ್ಷಗಳ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹಸವೇ ಪಡಬೇಕಾಯಿತು.
