ಶಿವಮೊಗ್ಗ, ಶಿಕ್ಷಕರ ನೇಮಕಾತಿಯನ್ನು ನಾಲ್ಕೈದು ತಿಂಗಳಲ್ಲಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಅವರು ತಿಳಿಸಿದರು.
ಇಂದು ಶಿವಮೊಗ್ಗದ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಒಳ ಮೀಸಲಾತಿ ಘೋಷಣೆಯಾದ ನಂತರ ಶುಕ್ರವಾರ ನೇಮಕಾತಿ ಕುರಿತು ಪ್ರಥಮ ಸಭೆ ನಡೆಸಲಾಗಿದೆ. ನಂತರ ಎರಡು ದಿನ ರಜೆ ಇತ್ತು. ಈಗ ಕೆಲಸದ ಮೊದಲ ದಿನವಾಗಿದೆ. ಒಳ ಮೀಸಲಾತಿ ಸಮಸ್ಯೆ ಬಗೆಹರಿದಿದೆ.
ಶಿಕ್ಷಕರ ನೇಮಕಾತಿಯ ಸಿಇಟಿ ಆದಷ್ಟು ಬೇಗ ಮಾಡುತ್ತೇವೆ’ ಎಂದರು.’ಕಳೆದ ವರ್ಷ 6 ತಿಂಗಳ ಒಳಗೆಯೇ ಮಾಡಿ ಮುಗಿಸಬೇಕೆಂದುಕೊಂಡಿದ್ದೆವು. ಈಗ ಒಳ ಮೀಸಲಾತಿ ಮುಗಿದಿದೆ. ಇದನ್ನು ನಾಲ್ಕೈದು ತಿಂಗಳಲ್ಲಿ ಮಾಡಿ ಮುಗಿಸಬೇಕೆಂದು ತೀರ್ಮಾನಿಸಿದ್ದೇವೆ.
ಜೂನ್ನಲ್ಲಿಯೇ ಶಿಕ್ಷಕರ ನೇಮಕ ಮಾಡಬೇಕು ಅಂದುಕೊಂಡಿದ್ವಿ. ನಂತರ ಜುಲೈನಲ್ಲಿ ಅಂದುಕೊಂಡಿದ್ದೆವು. ಎರಡು ಮೂರು ತಿಂಗಳಲ್ಲಿ ಮ್ಯಾಜಿಕ್ ಮಾಡಲು ಆಗಲ್ಲ, ಆದಷ್ಟು ಬೇಗ ಮಾಡಿ ಮುಗಿಸುತ್ತೇವೆ’ ಎಂದು ಹೇಳಿದರು.
‘ಯಾರು ಯಾರು ಓದಿಕೊಂಡಿದ್ದಾರೆ. ಅವರ ಕಷ್ಟ ನನಗೆ ಗೊತ್ತಿದೆ. ನನಗೂ ಕೂಡ ಅವಶ್ಯಕತೆ ಇದೆ. ನನ್ನ ಇಲಾಖೆಯಲ್ಲಿಯೇ ಅತಿ ಹೆಚ್ಚು ನೇಮಕಾತಿ ಮಾಡಿಕೊಡಬೇಕಿದೆ. ಕೆಲವರು ನಮ್ಮ ಬಳಿ ದುಡ್ಡಿಲ್ಲ ಅಂತ ಹೇಳಿದ್ದಾರೆ. ನಮ್ಮಲ್ಲಿ ದುಡ್ಡಿಲ್ಲ ಅನ್ನುವವರಿಗೆ ತಲೆಯಲ್ಲಿ ಬುದ್ಧಿಯೇ ಇಲ್ಲ’ ಎಂದು ಟೀಕಿಸಿದರು.
‘ಸರ್ಕಾರದಿಂದ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಕೋರ್ಟ್ನಲ್ಲಿ ವ್ಯಾಜ್ಯ ಇರುವುದರಿಂದ ನೇಮಕಾತಿ ತಡವಾಗುತ್ತಿದೆ. ರಾಜ್ಯದಲ್ಲಿ ಅತಿ ಹೆಚ್ಚು ನೇಮಕಾತಿ ಇರುವುದು ನಮ್ಮಇಲಾಖೆಯಲ್ಲಿ. ನಮ್ಮ ಇಲಾಖೆಯ ಟಿಇಟಿ ಪರೀಕ್ಷೆ ಮುಗಿದಿದೆ. ಈಗ ಸಿಇಟಿ ಪರೀಕ್ಷೆ ಆಗಬೇಕಿದೆ. ಈಗ ಒಳ ಮೀಸಲಾತಿ ಘೋಷಣೆ ಆಗಿರುವುದರಿಂದ ನೇಮಕಾತಿ ಹಾದಿ ಸುಗಮವಾಗಿದೆ’ ಎಂದು ಹೇಳಿದರು.
‘ನನಗೆ ಮೊದಲನೇ ವರ್ಷ ಇಲಾಖೆ ಬಗ್ಗೆ ತಿಳಿದುಕೊಳ್ಳಲು ಕಷ್ಟಕರವಾಗಿತ್ತು. ಫಲಿತಾಂಶದ ಬಗ್ಗೆ ಮಾತನಾಡುವವರು ಅವರ ಬಗ್ಗೆಯೇ ಅವರು ಟೀಕೆ ಮಾಡಿಕೊಂಡಂತೆ’ ಎಂದರು.
ಹೆಚ್. ವಿಶ್ವನಾಥ್ಗೆ ವಯಸ್ಸಾಗಿದೆ ಅವರನ್ನು ಕ್ಷಮಿಸೋಣ :
ಹೆಚ್. ವಿಶ್ವನಾಥ್ ಅವರು ಫಲಿತಾಂಶ ಹೆಚ್ಚಾಗಿರುವ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಹೆಚ್ ವಿಶ್ವನಾಥ್ ಅವರು ದೇಶದ ಭವಿಷ್ಯಕ್ಕೆ, ತಂದೆ ತಾಯಿಗೆ, ಅವರ ಶಿಕ್ಷಕರಿಗೆ ಮಾಡಿದ ಅವಮಾನವಾಗಿದೆ. ಅವರು ಕಾಪಿ ಹೊಡೆಯಿಸಿ ಪಾಸ್ ಮಾಡಿದ್ದರೆಂದು ಹೇಳಿದ್ದಾರೆ. ಆದರೆ ಹಿಂದೆ ಅಂಬಿ ನಿಂಗೆ ವಯಸ್ಸಾಯ್ತು ಎಂಬ ಫಿಲಂ ಮಾಡಿದ್ದರು. ಅದೇ ರೀತಿ ವಿಶ್ವನಾಥ್ ಅವರಿಗೆ ವಯಸ್ಸಾಗಿದೆ ಅಂತ ಹೇಳಬಹುದು. ಅವರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು.
ವಿಶ್ವನಾಥ್ ಎಲ್ಲಿದ್ದಾರೆಂದು ಯಾರಿಗೂ ತಿಳಿಯುತ್ತಿಲ್ಲ. ಅವರು ಯಾವ ಪಕ್ಷದಲ್ಲಿದ್ದಾರೆಂದು ತಿಳಿಯುತ್ತಿಲ್ಲ. ಮೈಸೂರು ಜಿಲ್ಲೆಗೆ ವಿಶ್ವನಾಥ್ ಅವಮಾನ ಮಾಡಿದ್ದಾರೆ. ಹೀನಾಯವಾಗಿ ಸೋತು, ಪುಕ್ಸಟ್ಟೆಯಾಗಿ ಪರಿಷತ್ ಸದಸ್ಯರಾಗಿದ್ದಾರೆ. ವಿಶ್ವನಾಥ್ಗೆ ವಯಸ್ಸಾಗಿದೆ. ಅವರನ್ನು ಕ್ಷಮಿಸಿ ಬಿಡೋಣ ಎಂದು ಹೇಳಿದರು.
ಅಂಬೇಡ್ಕರ್ ಅವರ ವಿಚಾರಧಾರೆಯನ್ನು ನಾನು ನನ್ನ ಇಲಾಖೆಯಲ್ಲಿ ಜಾರಿ ಮಾಡಿದ್ದೇನೆ. ಎಸ್ಸಿ/ ಎಸ್ಟಿ ಅವರು ಹೆಚ್ಚು ಪಾಸಾಗಿದ್ದಾರೆ.
ಅವರಿಗೆ ಇಲಾಖೆಯಲ್ಲಿ ನಮ್ಮ ಮನೆ ಮಕ್ಕಳಂತೆ ಪಾಠ ಹೇಳಿ ಕೊಟ್ಟಿದ್ದಾರೆ. ನಮ್ಮ ಇಲಾಖೆಯ ಮೇಲೆ ಟೀಕೆ ಮಾಡಿದಾಗ ನೋವಾಗುತ್ತದೆ. ಆದರೆ ಮಕ್ಕಳು ಪಾಸ್ ಆಗಿ ಅವರಿಗೆಲ್ಲ ತಕ್ಕ ಉತ್ತರ ನೀಡಿದ್ದಾರೆ ಎಂದರು.

