ಬೆಂಗಳೂರು, ಅಪ್ರಾಪ್ತರು ವಾಹನ ಚಲಾಯಿಸುವುದು ಶಿಕ್ಷಾರ್ಹ ಅಪರಾಧ. ಈ ಕುರಿತಂತೆ ಸಂಚಾರ ಪೊಲೀಸರು ನಿರಂತರ ಜಾಗೃತಿ ಮೂಡಿಸುತ್ತಿದ್ದರೂ, ದ್ವಿಚಕ್ರ ವಾಹನ ಮಾಲೀಕರು ಮಕ್ಕಳಿಗೆ ವಾಹನ ಚಾಲನೆಗೆ ಅವಕಾಶ ನೀಡಿ ನೀಲರ್ಕ್ಷ್ಯ ವಹಿಸುತ್ತಿದ್ಧಾರೆ.
ಬೆಂಗಳೂರು ನಗರದ ಪಾದರಾಯನಪುರದ ಬಳಿ ಗೋರಿಪಾಳ್ಯ ಬಳಿ ಒಂದೇ ದ್ವಿಚಕ್ರ ವಾಹನದಲ್ಲಿ ಆರು ಮಕ್ಕಳು ಕುಳಿತುಕೊಂಡು ಚಾಲನೆ ಮಾಡುವ ರೀತಿಯಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಈ ಬಗ್ಗೆ ಬೆಂಗಳೂರು ನಗರ ಸಂಚಾರ ಪೊಲೀಸರ ಅಧಿಕೃತ ಎಕ್ಸ್ ಖಾತೆಗೆ ಶ್ರೇಯಸ್ ಶೇಯು ಹೆಸರಿನ ಖಾತೆಯಿಂದ ಫೋಟೋ ಟ್ಯಾಗ್ ಮಾಡಲಾಗಿತ್ತು.ಎಪ್ರಿಲ್ 26ರಂದು ಬೆಳಗ್ಗೆ 10:45ರ ಸುಮಾರಿಗೆ ಪಾದರಾಯನಪುರ ಮುಖ್ಯರಸ್ತೆಯ ಗೋರಿಪಾಳ್ಯದ ಬಳಿ ದ್ವಿಚಕ್ರ ವಾಹನದಲ್ಲಿ (ಕೆಎ 05JZ90650) ಆರು ಮಕ್ಕಳು ಕುಳಿತುಕೊಂಡು ಚಾಲನೆ ಮಾಡುತ್ತಿದ್ದಾರೆ. ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿತ್ತು.
ಮಾಲೀಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ
ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದಂತೆ, ಮಾಗಡಿ ರಸ್ತೆ ಸಂಚಾರ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ನೋಂದಣಿ ಸಂಖ್ಯೆ ಆಧರಿಸಿ ಪರಿಶೀಲಿಸಿದಾಗ ಮಾಲೀಕ ಅಜ್ವರ್ ಪಾಷಾ ಬಾಪೂಜಿ ನಗರದ ನಿವಾಸಿ ಎಂದು ಗೊತ್ತಾಗಿದೆ. ವಿಳಾಸ ಆಧರಿಸಿ ಮನೆ ಬಳಿ ಹೋದಾಗ ಮನೆ ಇಲ್ಲದಿರುವುದು ತಿಳಿದುಬಂದಿದೆ.
ವೈರಲ್ ಆಗುತ್ತಿರುವ ಪೋಸ್ಟ್ನಲ್ಲಿ ಬೈಕ್ ಚಾಲನೆ ಮಾಡುತ್ತಿರುವ ಬಗ್ಗೆ ಎಲ್ಲಿಯೂ ವಿಡಿಯೋ ದೊರೆತಿಲ್ಲ. ಮಕ್ಕಳನ್ನು ವಾಹನದಲ್ಲಿ ಕೂರಿಸಿಕೊಂಡು ಫೋಟೋ ಸೆರೆಹಿಡಿಯಲು ಈ ರೀತಿ ಮಾಡಿರಬಹುದಾ? ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ.
ಸದ್ಯ ಮಾಲೀಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

