ಶಿವಮೊಗ್ಗ,ಜಿಲ್ಲೆಯಾದ್ಯಂತ ಕಳೆದ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯಿಂದಾಗಿ ರೈತರ ಬೆಳೆ ಹಾನಿ, ಮನೆಗಳ ಮೇಲ್ಛಾವಣಿ ಕುಸಿತ ಹಾಗೂ ವಿದ್ಯುತ್ ವ್ಯತ್ಯಯದಂತಹ ಗಂಭೀರ ಸಮಸ್ಯೆಗಳು ಎದುರಾಗಿವೆ. ಈ ಕುರಿತು ಇಂದು ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಮಳೆಯಿಂದ ಮನೆ ಕಳೆದುಕೊಂಡವರಿಗೆ ಹಾಗೂ ಅಡಿಕೆ ಸೇರಿದಂತೆ ವಿವಿಧ ಬೆಳೆ ಹಾನಿಗೊಳಗಾದ ರೈತರಿಗೆ ಜಿಲ್ಲಾಡಳಿತವು ತಕ್ಷಣವೇ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ವಿತರಿಸಬೇಕು. ಜಿಲ್ಲೆಯ ಅನೇಕ ಕಡೆ ನೂರಾರು ವಿದ್ಯುತ್ ಕಂಬಗಳು ಧರೆಗುರುಳಿವೆ. ಮೆಸ್ಕಾಂ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸಿ, ತುಂಡಾದ ತಂತಿಗಳನ್ನು ಸರಿಪಡಿಸಿ ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.

ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಹಾಗೂ ತುಂಡಾಗಿ ಬಿದ್ದಿರುವ ತಂತಿಗಳಿಂದ ಜನ-ಜಾನುವಾರುಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.
ಜನಸಾಮಾನ್ಯರ ಈ ಸಂಕಷ್ಟಕ್ಕೆ ಜಿಲ್ಲಾಡಳಿತ ಮತ್ತು ಮೆಸ್ಕಾಂ ಅಧಿಕಾರಿಗಳು ಶೀಘ್ರವಾಗಿ ಸ್ಪಂದಿಸದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಈ ಮೂಲಕ ಎಚ್ಚರಿಸಲಾಗಿದೆ.
ಸಂಕಷ್ಟದಲ್ಲಿರುವ ಜಿಲ್ಲೆಯ ಜನರೊಂದಿಗೆ ನಾವಿದ್ದೇವೆ ಎಂದು ಲೋಕಸಭಾ ಸದಸ್ಯರಾದ ಶ್ರೀ ಬಿ.ವೈ. ರಾಘವೇಂದ್ರ ಅವರು ತಿಳಿಸಿದರು. ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಎನ್. ಕೆ. ಜಗದೀಶ್ ಅವರ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲಾಯಿತು ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ. ಎಸ್. ಅರುಣ್ ಅವರು ಧನಂಜಯ್ ಸರ್ಜಿ ಅವರು ಶಿವಮೊಗ್ಗ ಗ್ರಾಮಾಂತರದ ಮಾಜಿ ಶಾಸಕರಾದ ಅಶೋಕ್ ನಾಯ್ಕ್ ಅವರು ಬೆಳೆ ಹಾನಿಗೊಳಗಾದ ಭಾಗದ ರೈತರು ಹಾಗೂ ಗ್ರಾಮಾಂತರ ಭಾಗದ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳದ ಮಾಲತೇಶ್ ಅವರು ಸಂತೋಷ್ ಬಳ್ಳೆಕೆರೆಯವರು ಜಿಲ್ಲಾ ಕಾರ್ಯದರ್ಶಿಯಾದ ಶ್ರೀಮತಿ ಸುರೇಖಾ ಮುರುಳಿಧರ್ ಹಾಗೂ ಸಂತೋಷ ಅವರು ಹಾಗೂ ಮಾಧ್ಯಮ ಪ್ರಮುಖ್ ಚಂದ್ರಶೇಖರ್ ಎಸ್. ಬೆಳೆ ಹಾನಿಗೊಳಗಾದ ಭಾಗದ ರೈತರು ಹಾಗೂ ಗ್ರಾಮಾಂತರ ಭಾಗದ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು

