ಮಾಜಿ ಮುಖ್ಯಮಂತ್ರಿ ರಾಷ್ಟ್ರ ನಾಯಕ ಶ್ರೀ ರಾಮಕೃಷ್ಣ ಹೆಗಡೆ ಅವರು, ನಾಡು ಕಂಡ ಸಾಹಿತ್ಯ, ಸಂಸ್ಕೃತಿ ಅಭಿರುಚಿ, ಉಳ್ಳಂತಹ ಪ್ರಮುಖ ನಾಯಕರು.
27 ನೇ ವಯಸ್ಸಿನಲ್ಲಿ ಪತ್ರಕರ್ತರಾಗಿ ಕೆಲವು ಕಾಲ ಕಾರ್ಯ ನಿರ್ವಹಿಸಿದ್ದಾರೆ.
ರಾಜ್ಯದಲ್ಲಿ ವೀರೇಂದ್ರ ಪಾಟೀಲ್ ಮಂತ್ರಿ ಮಂಡಲದಲ್ಲಿ ಹಣಕಾಸು ಸಚಿವರಾಗಿದ್ದಾಗ ಪ್ರಥಮ ಬಾರಿಗೆ ಕನ್ನಡ ಚಲನಚಿತ್ರಗಳಿಗೆ ಸಬ್ಸಿಡಿ ಯೋಜನೆಯ ಜಾರಿಗೆ ತಂದಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿಗೆ ಅಂದಿನ ಅಧ್ಯಕ್ಷರಾಗಿದ್ದ ಜಿ ನಾರಾಯಣ್ ರವರ ಮನವಿಯ ಮೇರೆಗೆ ಪ್ರಥಮ ಬಾರಿಗೆ ರಾಜ್ಯ ಸರ್ಕಾರದಿಂದ ಅನುದಾನವನ್ನು ಕೊಡುವ ನಿರ್ಧಾರ ಮಾಡಿರುತ್ತಾರೆ.
ಮುಖ್ಯಮಂತ್ರಿಗಳಾಗಿದ್ದಾಗ ಆಡಳಿತದಲ್ಲಿ ಕನ್ನಡ ಭಾಷೆಯನ್ನು ಜಾರಿಗೊಳಿಸುವ ಸಲುವಾಗಿ ಪ್ರಥಮ ಬಾರಿಗೆ ಕನ್ನಡ ಕಾವಲು ಸಮಿತಿ ನೇಮಕ ಮಾಡಿರುತ್ತಾರೆ,
ಇವರು ಮುಖ್ಯಮಂತ್ರಿಗಳಾಗುವ ಮುನ್ನ ಆರ್ ಗುಂಡೂರಾಯರು ವಿಶ್ವ ಕನ್ನಡ ಸಮ್ಮೇಳನಕ್ಕೆ ನಡೆಸಿದ್ದ ಪೂರ್ವ ತಯಾರಿಯನ್ನು ಮುಂದುವರಿಸಿ ಮೈಸೂರಿನಲ್ಲಿ ಪ್ರಥಮ ಬಾರಿಗೆ ಕನ್ನಡ ಭಾಷೆಯ ವಿಶ್ವ ಸಾಹಿತ್ಯ ಸಮ್ಮೇಳನವನ್ನು ನಡೆಸಿರುತ್ತಾರೆ. ಗುಂಡೂರಾಯರು ಮುದ್ರಿಸಿದ್ದ ಪುಸ್ತಕಗಳನ್ನು ಯಾವುದೇ ಬದಲಾವಣೆ ಮಾಡದೆ ಬಿಡುಗಡೆ ಮಾಡುತ್ತಾರೆ.
ಹಂಪಿ ಕನ್ನಡ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಯೋಜನೆಗೆ ವೇದಿಕೆಯನ್ನು ಸಿದ್ಧಪಡಿಸಿಕೊಟ್ಟಿರುತ್ತಾರೆ.
ವಿಶ್ವದ ಶ್ರೇಷ್ಠ ನಾಟಕಗಾರ ಬಿ .ವಿ ಕಾರಂತರ ಸಂಕಷ್ಟದ ಸಮಯದಲ್ಲಿ ಅವರ ಅನುಭವ ಮತ್ತು ಜ್ಞಾನವನ್ನು ಬಳಸಿಕೊಳ್ಳುವ ಸಲುವಾಗಿಯೇ ಮೈಸೂರಿನಲ್ಲಿ ರಂಗ ತರಬೇತಿ ನೀಡುವ ರಂಗಾಯಣ ನಾಟಕ ಶಾಲೆಯ ಸ್ಥಾಪನೆಗೆ ಕಾರಣಕರ್ತರಾಗಿರುತ್ತಾರೆ.
ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಅನೇಕ ಸಾಹಿತಿ ಕಲಾವಿದರನ್ನು ಗುರುತಿಸಿ ಸ್ವಯಂ ಪ್ರೇರಣೆಯಿಂದಲೇ ಅವರಿಗೆ ನಿವೇಶನಗಳನ್ನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಒದಗಿಸಿ ಕೊಟ್ಟಿರುತ್ತಾರೆ.
ಸಾಹಿತಿ, ಕಲಾವಿದರು ಮತ್ತು ಬರಹಗಾರರು ಹಾಗೂ ಸಂಗೀತಗಾರರು ಇವರ ಜೊತೆಯಲ್ಲಿ ಉತ್ತಮವಾದ ಬಾಂಧವ್ಯವನ್ನು ಹೊಂದಿದ್ದರು.
ವಿದೇಶಗಳಲ್ಲಿ ನಡೆಯುವ ಕನ್ನಡದ ಕಾರ್ಯಕ್ರಮಗಳಿಗೆ ಅತ್ಯಂತ ಆಸಕ್ತಿಯಿಂದ ನಮ್ಮ ನಾಡಿನ ಪ್ರತಿನಿಧಿಗಳನ್ನು ಕಳುಹಿಸಿಕೊಡುವ ನಿಟ್ಟಿನಲ್ಲಿ ಯಾವುದೇ ರೀತಿಯ ತಾರತಮ್ಯ ಅಥವಾ ಸಣ್ಣತನವನ್ನು ಎಂದೂ ಪ್ರದರ್ಶಿಸಿರುವುದಿಲ್ಲ.
ರಾಜಕೀಯದ ಬಿಡುವಿನ ವೇಳೆಯಲ್ಲಿ ನಾಟಕ ವೀಕ್ಷಿಸುವುದು, ಸಂಗೀತ ಆಲಿಸುವುದು, ಪುಸ್ತಕವನ್ನು ಓದುವ ಹವ್ಯಾಸವನ್ನು ರೂಡಿಸಿಕೊಂಡಿದ್ದರು.
ಸ್ವಚ್ಛವಾದ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಮಾತನಾಡುತ್ತಿದ್ದರು. ಜೊತೆಗೆ ಬರೆಯುತ್ತಿದ್ದರು. ಮಾತಿನಲ್ಲೂ ಸಹ ಎಲ್ಲೂ ಸಣ್ಣ ಲೋಪವಾಗದಂತೆ ಭಾಷೆಯನ್ನು ಶುದ್ಧವಾಗಿ ಬಳಸುತ್ತಿದ್ದರು .ಅದೇ ರೀತಿಯಲ್ಲಿ ಕಡತಗಳಲ್ಲಿ ಮತ್ತು ತಾವು ನೀಡುವ ಪತ್ರಗಳಲ್ಲಿ ಎಲ್ಲಿಯೂ ಭಾಷೆಯ ಲೋಪಗಳು ಇಲ್ಲದಂತೆ ಎಚ್ಚರಿಕೆವಹಿಸುತ್ತಿದ್ದರು.
ಮುಖ್ಯಮಂತ್ರಿಗಳಾಗಿದ್ದಾಗ ವಿವಿಧ ಅಕಾಡೆಮಿಗಳಿಗೆ ಅನುಭವ ಮತ್ತು ಪಾಂಡಿತ್ಯವುಳ್ಳ ವ್ಯಕ್ತಿಗಳನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಅವರು ಸ್ವತಂತ್ರವಾಗಿ ಕರ್ತವ್ಯವನ್ನ ನಿರ್ವಹಿಸಲು ಬೇಕಾದಂತಹ ಆಡಳಿತಾತ್ಮಕ ವ್ಯವಸ್ಥೆಯನ್ನು ಮಾಡಿ, ಜೊತೆಗೆ ಅನುದಾನವನ್ನು ನೀಡುವಲ್ಲಿಯೂ ಉದಾರತೆಯನ್ನು ತೋರುತ್ತಿದ್ದರು.
ಮುಖ್ಯಮಂತ್ರಿಗಳಾಗಿದ್ದಾಗ ವಿಧಾನ ಪರಿಷತ್ತಿಗೆ ನಾಮಕರಣ ಮಾಡುವ ಸಂದರ್ಭದಲ್ಲಿ ಸಾಹಿತಿಗಳು, ಕಲಾವಿದರು, ಸಂಗೀತಗಾರರು, ಇವರಿಗೆ ಆದ್ಯತೆಯನ್ನು ಕೊಡುತ್ತಿದ್ದರು. ಇದರಿಂದಾಗಿ ಸಿದ್ದಲಿಂಗಯ್ಯನವರು, ಮಲ್ಲಿಕಾರ್ಜುನ್ ಮನ್ಸೂರ್, ಖಾದ್ರಿ ಶಾಮಣ್ಣ, ಕುಸುಮಾಕರ್ ದೇಸಾಯಿ, ಅನಂತನಾಗ್ ಮುಂತಾದವರು ವಿಧಾನ ಪರಿಷತ್ತಿನ ಸದಸ್ಯರಾಗಲು ಸಾಧ್ಯವಾಯಿತು. ತಮಗೆ ಶಿಫಾರಸು ಮಾಡುವ ಅವಕಾಶಗಳು ದೊರಕಾಗಲು ಸಹ ಸಾಹಿತಿ ,ಕಲಾವಿದರನ್ನು ಮೊದಲು ಪರಿಗಣಿಸುತ್ತಿದ್ದರು. ಇದರಿಂದಾಗಿ ಮಹದೇವ ಬಣಕರ್ ಮುಂತಾದವರು ಸಹ ವಿಧಾನ ಪರಿಷತ್ತಿನ ಸದಸ್ಯರಾಗಲು ಸಾಧ್ಯವಾಯಿತು.
ಒಳ್ಳೆಯ ಓದುಗರು ಆಗಿದ್ದ ಇವರು ಸಾಕಷ್ಟು ಪುಸ್ತಕಗಳನ್ನು ಬರೆದಿರುತ್ತಾರೆ. ಚುನಾವಣಾ ಸುಧಾರಣೆಗಾಗಿ ಇವರು ಪುಸ್ತಕವನ್ನು ರಚಿಸಿದ್ದರು. ಈಶಾನ್ಯ ಭಾರತದಲ್ಲಿನ ಸಮಸ್ಯೆಗಳ ಕುರಿತು ಪುಸ್ತಕವನ್ನು ಬರೆದಿದ್ದರು. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿಚಾರದ ಸಂಬಂಧದಲ್ಲೂ ಪುಸ್ತಕ ಬರೆದಿದ್ದಾರೆ. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಂಬಂಧಗಳ ವಿಚಾರದಲ್ಲೂ ಪುಸ್ತಕವನ್ನು ಬರೆದಿದ್ದಾರೆ.
ಭರತನಾಟ್ಯಕ್ಕೆ ಹೇಳಿ ಮಾಡಿಸಿದಂತೆ ಯವನಿಕ ಸಭಾಂಗಣವನ್ನು ನಿರ್ಮಿಸಿರುತ್ತಾರೆ. ಜೊತೆಗೆ ರವೀಂದ್ರ ಕಲಾಕ್ಷೇತ್ರವು ಸೇರಿದಂತೆ ಹಲವಾರು ರಂಗ ಚಟುವಟಿಕೆಗಳ ಕೇಂದ್ರಗಳ ಆಧುನಿಕರಣಕ್ಕೆ ಆದ್ಯತೆ ನೀಡಿದ್ದರು.
ಕನ್ನಡ ಭಾಷೆಯ ಬಗ್ಗೆ ಅಪಾರವಾದ ಪ್ರೀತಿಯಿದ್ದ ಇವರು ಅನಿವಾರ್ಯವಾದ ಸಂದರ್ಭದಲ್ಲಿ ಮಾತ್ರ ,ಇಂಗ್ಲೀಷ್ ಮತ್ತು ಹಿಂದಿ ಭಾಷೆಯನ್ನು ಭಾಷಣಗಳಲ್ಲಿ ಮತ್ತು ಕಡತದಲ್ಲಿ ಬಳಸುತ್ತಿದ್ದರು. ಉಳಿದಂತೆ ಕನ್ನಡ ಭಾಷೆಗೆ ಮೊದಲ ಸ್ಥಾನವನ್ನು ನೀಡುತ್ತಿದ್ದರು.
ಹಲವಾರು ಸಂಗೀತ ಕಾರ್ಯಕ್ರಮ ನಡೆಸಲು, ನಾಟಕ ಪ್ರದರ್ಶನ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿರುತ್ತಾರೆ.
ಕನ್ನಡ ನಾಡಿನ ಅನೇಕ ಪತ್ರಕರ್ತನ ಒಡನಾಟವು ಇವರಿಗಿತ್ತು. ಅದೇ ರೀತಿಯಲ್ಲಿ ಪತ್ರಕರ್ತರು ಮತ್ತು ಹೆಗಡೆಯವರ ನಡುವೆ ಆತ್ಮೀಯತೆ ಇತ್ತು. ಹಾಗೆಂದು ಎಂದು ಸಹ ಅವರ ಸ್ನೇಹವನ್ನು ದುರುಪಯೋಗ ಮಾಡಿಕೊಂಡಿರುವುದಿಲ್ಲ ಮತ್ತು ಇವರನ್ನು ಟೀಕಿಸುವ ಪತ್ರಕರ್ತರನ್ನು ಸಹ ಗೌರವದಿಂದ ಕಾಣುತ್ತಿದ್ದರು.
ತಮ್ಮ ಸಂಪುಟದಲ್ಲಿ ಎಂಪಿ ಪ್ರಕಾಶ್, ಡಾ. ಜೀವರಾಜ್ ಆಳ್ವ ಮುಂತಾದವರಿಗೆ ಇದ್ದಂತಹ ಸಾಹಿತ್ಯ, ಸಂಸ್ಕೃತಿ, ಮೇಲಿನ ಆಸಕ್ತಿಯನ್ನು ಗಮನಿಸಿ ಅವರಿಗೆ ಈ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ದಾರಿಯನ್ನ ವಹಿಸುತ್ತಿದ್ದರು. ಇದರಿಂದಾಗಿ ಇವರಿಬ್ಬರು ಕನ್ನಡ ನಾಡಿನಲ್ಲಿ ಸಂಸ್ಕೃತಿ ಮತ್ತು ಕಲೆಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಲು ಸಾಧ್ಯವಾಗಿರುತ್ತದೆ.
ರಾಜಕೀಯ ಕ್ಷೇತ್ರದಲ್ಲಿ ಬಿಡುವಿಲ್ಲದ ಕಾರ್ಯಗಳ ನಡುವೆಯೂ ಬಿಡುವು ಮಾಡಿಕೊಂಡು ಸಂಗೀತ ಮತ್ತು ಸಂಸ್ಕೃತಿಯ ವಿಚಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಉತ್ತಮ ನಾಟಕ ನಡೆಯುತ್ತಿದ್ದ ಸಂದರ್ಭದಲ್ಲಿ ಯಾವುದೇ ರೀತಿಯ ಮಾಹಿತಿ ನೀಡದೆ ಕಲಾಕ್ಷೇತ್ರದಲ್ಲಿ ಬಂದು ನಾಟಕವನ್ನು ವೀಕ್ಷಿಸಿದಂತಹ ಉದಾಹರಣೆಯು ಇದೆ. ಇವರು ಪ್ರಜಾ ಶಕ್ತಿ ಮತ್ತು ಮರಣ ಮೃದಂಗ ಎಂಬ ಎರಡು ಚಲನಚಿತ್ರಗಳನ್ನು ಅಭಿನಯಿಸಿದ್ದಾರೆ.
ರಾಷ್ಟ್ರೀಯ ನವ ನಿರ್ಮಾಣ ವೇದಿಕೆಯ ಮೂಲಕ ಪ್ರಚಲಿತ ವಿಚಾರಗಳ ಬಗ್ಗೆ ಹಲವಾರು ವಿಚಾರ ಸಂಕೀರ್ಣಗಳನ್ನು, ಚರ್ಚಾ ಗೋಷ್ಠಿಗಳನ್ನು, ಉಪನ್ಯಾಸಗಳನ್ನು ರಾಷ್ಟ್ರೀಯ ಮಟ್ಟದ ಆಯಾ ಕ್ಷೇತ್ರದ ಮಾನವ ಸಂಪನ್ಮೂಲ ವ್ಯಕ್ತಿಗಳ ಮೂಲಕ ಏರ್ಪಡಿಸಿದ್ದರು. ಇಂದಿಗೂ ರಾಷ್ಟ್ರೀಯ ನವನಿರ್ಮಾಣ ವೇದಿಕೆ ಹೆಗಡೆ ರವರ ಆಶಯದಂತೆ ಸಾಮಾಜಿಕ ಸಂಘಟನೆಯಾಗಿ ಮುಂದುವರೆದಿದೆ.
ಸಾಹಿತ್ಯ ,ಸಂಸ್ಕೃತಿ, ಕಲೆ, ಸಂಗೀತ ಹೀಗೆ ಎಲ್ಲ ಪ್ರಕಾರದಲ್ಲೂ ಆಸಕ್ತಿಯನ್ನು ಹೊಂದಿದ್ದ, ಶ್ರೀ ರಾಮಕೃಷ್ಣ ಹೆಗಡೆಯವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ರಾಷ್ಟ್ರೀಯ ನವ ನಿರ್ಮಾಣ ವೇದಿಕೆ ವತಿಯಿಂದ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ 29, 7, 2026ರಂದು ಸಂಜೆ ರಾಗ ಸಮರ್ಪಣ ಎಂಬ ಕಾರ್ಯಕ್ರಮ ಮೂಲಕ ಗೌರವವನ್ನು ಅರ್ಪಿಸುತ್ತಿರುವುದು ವಿಶೇಷವಾದ, ವಿನೂತನವಾದ ಕಾರ್ಯಕ್ರಮವಾಗಿರುತ್ತದೆ
ಸ್ವಾತಂತ್ರ್ಯ ಚಳವಳಿಯಿಂದ ಬದುಕನ್ನು ಆರಂಭಿಸಿ, ರಾಜ್ಯದ ಹಣಕಾಸು ಸಚಿವರಾಗಿ, ಪಂಚಾಯತ್ ರಾಜ್ ಸಚಿವರಾಗಿ, ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಯಾಗಿ, ವಿಧಾನ ಪರಿಷತ್ತಿನ ರಾಜ್ಯಸಭೆಯ ಸದಸ್ಯರಾಗಿ ,ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಕೇಂದ್ರದ ಸಚಿವರಾಗಿ ಐದು ದಶಕಗಳ ಸುದೀರ್ಘವಾದ ಸಾರ್ವಜನಿಕ ಜೀವನವನ್ನು ಮುನ್ನಡೆಸಿ, ಸಾರ್ಥಕ ಪಯಣವನ್ನ ಮುಗಿಸಿದ ಇವರ ಜನ್ಮ ಶತಮಾನೋತ್ಸವ ಸರ್ಕಾರಗಳು ಆಚರಿಸದಿದ್ದರೂ, ಇವರದೇ ಆದಂತಹ ಅಭಿಮಾನಿ ಬಳಗ ಒಂದಾಗಿ, ಆಚರಿಸುವುದರ ಮೂಲಕ ಇವರ ಮೇಲಿನ ಪ್ರೀತಿಯನ್ನು ಸಾಕ್ಷಿಕರಿಸುತ್ತಿದ್ದಾರೆ.
ಬರಹ : ಎಂ .ಮಾಲತೇಶ್
ನಿರ್ದೇಶಕರು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ,
ಕರ್ನಾಟಕ ಸರ್ಕಾರ

