ಶಿವಮೊಗ್ಗ ದಸರಾ ಮಹೋತ್ಸವದ ಪೂರ್ವಸಿದ್ಧತಾ ಕಾರ್ಯಗಳನ್ನು ತಕ್ಷಣವೇ ಪ್ರಾರಂಭಿಸಿ ; ಪಾಲಿಕೆ ಆಯುಕ್ತರಿಗೆ ಎಚ್. ಸಿ. ಯೋಗೇಶ್ ನೇತೃತ್ವದಲ್ಲಿ ಮನವಿ

ಶಿವಮೊಗ್ಗ

ನಾಡ ಹಬ್ಬದ ದಸರಾ ಶಿವಮೊಗ್ಗ ನಗರದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಸಹ ವಿಜೃಂಭಣೆಯಿಂದ ನಾಡಹಬ್ಬ ದಸರವನ್ನು ಆಚರಿಸಬೇಕಾಗಿ ಇದರ ವಿಚಾರವಾಗಿ ಮಾನ್ಯ ಮಹಾನಗರ ಪಾಲಿಕೆ ಆಯುಕ್ತರನ್ನು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ 2023 ರ ಅಭ್ಯರ್ಥಿಯಾಗಿದ್ದಂತಹ ಹೆಚ್ ಸಿ ಯೋಗೇಶ್ ರವರು ನಗರದಲ್ಲಿ ಪ್ರತಿವರ್ಷ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳ ಸಹಯೋಗದಲ್ಲಿ ದಸರಾ ಮಹೋತ್ಸವವನ್ನು ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಿಕೊಂಡು ಬರಲಾಗುತ್ತಿದೆ.

ಜಂಬೂಸವಾರಿ, ಶ್ರೀ ಚಾಮುಂಡೇಶ್ವರಿ ದೇವಿಯ ಮೆರವಣಿಗೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಪ್ರದರ್ಶನಗಳು ಹಾಗೂ ಸಾರ್ವಜನಿಕರಿಗೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗುತ್ತದೆ.

2026ನೇ ಸಾಲಿನ ದಸರಾ ಮಹೋತ್ಸವವನ್ನು ಸಹ ಅತ್ಯಂತ ವ್ಯವಸ್ಥಿತವಾಗಿ ಹಾಗೂ ಯಶಸ್ವಿಯಾಗಿ ಆಯೋಜಿಸುವ ಉದ್ದೇಶದಿಂದ ಕಾರ್ಯಕ್ರಮಗಳ ಪೂರ್ವಸಿದ್ಧತೆಯನ್ನು ಮುಂಚಿತವಾಗಿಯೇ ಪ್ರಾರಂಭಿಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಮನವಿ ಮಾಡಿರುತ್ತಾರೆ. ಅದರಂತೆ,

1. ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ:

ದಸರಾ ಮಹೋತ್ಸವದ ಕಾರ್ಯಕ್ರಮಗಳ ವ್ಯಾಪ್ತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಸಕ್ತ ಸಾಲಿನ ದಸರಾ ಆಚರಣೆಗೆ ಅಗತ್ಯವಿರುವ **ಹೆಚ್ಚುವರಿ ಅನುದಾನವನ್ನು ಸರ್ಕಾರದಿಂದ ಮಂಜೂರು ಮಾಡಿಸಲು ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವಂತೆ** ಕೋರಲಾಗಿದೆ.

2. ಜಂಬೂ ಸವಾರಿಗೆ ಅಗತ್ಯ ವ್ಯವಸ್ಥೆ:

ಶಿವಮೊಗ್ಗ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂ ಸವಾರಿಯನ್ನು ಸುಸೂತ್ರವಾಗಿ ನಡೆಸಲು ಅಗತ್ಯವಿರುವ ಆನೆಗಳ ಲಭ್ಯತೆ ಹಾಗೂ ಸಂಬಂಧಿತ ಅನುಮತಿಗಳ ಕುರಿತು ಮಾನ್ಯ ಅರಣ್ಯ ಸಚಿವರಿಗೆ ಮುಂಚಿತವಾಗಿ ಪತ್ರ ಸಲ್ಲಿಸಿ ಅರಣ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ಕೋರಲಾಗಿದೆ.

3. ಒಂಬತ್ತು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು:

ದಸರಾ ಮಹೋತ್ಸವದ ಅಂಗವಾಗಿ ಒಂಬತ್ತು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಸೂಕ್ತ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು. ಸಂಗೀತ, ನೃತ್ಯ, ನಾಟಕ, ಜನಪದ ಕಲೆ ಸೇರಿದಂತೆ ವಿವಿಧ ಪ್ರಕಾರಗಳ ಕಲಾ ತಂಡಗಳು ಹಾಗೂ ಕಲಾವಿದರಿಗೆ ಅವಕಾಶ ಕಲ್ಪಿಸಬೇಕು.

4. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ:

ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸ್ಥಳೀಯ ಕಲಾವಿದರು, ಕಲಾ ತಂಡಗಳು ಹಾಗೂ ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವಂತೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಸಾಂಸ್ಕೃತಿಕ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಹೆಚ್ಚಿನ ಆದ್ಯತೆ ನೀಡಬೇಕು.

5. ವಿವಿಧ ಸ್ಪರ್ಧೆಗಳ ಆಯೋಜನೆ:

ಮಕ್ಕಳು, ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರನ್ನು ಒಳಗೊಂಡಂತೆ ವಿವಿಧ ಸಾಂಸ್ಕೃತಿಕ ಮತ್ತು ಸಾರ್ವಜನಿಕ ಸ್ಪರ್ಧೆಗಳನ್ನು ಆಯೋಜಿಸಿ, ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸುವಂತೆ ಕಾರ್ಯಕ್ರಮ ರೂಪಿಸಬೇಕು.

6. ಉಪಸಮಿತಿಗಳ ರಚನೆ:

ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳ ಪರಿಣಾಮಕಾರಿ ನಿರ್ವಹಣೆಗಾಗಿ ಅಗತ್ಯತೆಗೆ ಅನುಗುಣವಾಗಿ ಸುಮಾರು 8 ರಿಂದ 15 ಉಪಸಮಿತಿಗಳನ್ನು ರಚಿಸಿ, ಪ್ರತಿ ಸಮಿತಿಗೆ ಸೂಕ್ತ ಮುಖ್ಯಸ್ಥರನ್ನು ನೇಮಿಸಿ, ಅವರಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ವಹಿಸಬೇಕು.

7. ಇಲಾಖೆಗಳ ನಡುವೆ ಸಮನ್ವಯ:

ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಆರೋಗ್ಯ ಇಲಾಖೆ, ಮೆಸ್ಕಾಂ ಹಾಗೂ ಇತರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಗಳನ್ನು ನಡೆಸಿ, ಪ್ರತಿಯೊಂದು ಇಲಾಖೆಯ ಜವಾಬ್ದಾರಿಗಳನ್ನು ನಿಗದಿಪಡಿಸಬೇಕು.

8. ಅಗತ್ಯ ಮೂಲಸೌಕರ್ಯ ಹಾಗೂ ಸಾರ್ವಜನಿಕ ಸೌಲಭ್ಯಗಳು:

ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ವೇದಿಕೆ, ವಿದ್ಯುತ್ ವ್ಯವಸ್ಥೆ, ಧ್ವನಿ ವ್ಯವಸ್ಥೆ, ಬೆಳಕಿನ ಅಲಂಕಾರ, ಸ್ವಚ್ಛತೆ, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯಗಳು, ಪಾರ್ಕಿಂಗ್, ಸಂಚಾರ ನಿಯಂತ್ರಣ, ವೈದ್ಯಕೀಯ ಸೌಲಭ್ಯ ಹಾಗೂ ಸಾರ್ವಜನಿಕರ ಭದ್ರತೆಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮುಂಚಿತವಾಗಿ ಸಿದ್ಧಪಡಿಸಬೇಕು.

9. ಪೂರ್ವಭಾವಿ ಸಭೆ ಹಾಗೂ ಸಮಗ್ರ ಕ್ರಿಯಾ ಯೋಜನೆ:

ದಸರಾ ಮಹೋತ್ಸವದ ಯಶಸ್ವಿ ನಿರ್ವಹಣೆಗಾಗಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಮಿತಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ, ಕಾರ್ಯಕ್ರಮಗಳ ದಿನಾಂಕವಾರು ವೇಳಾಪಟ್ಟಿ, ಜವಾಬ್ದಾರಿಗಳು ಹಾಗೂ ಅಗತ್ಯ ಬಜೆಟ್‌ಗಳನ್ನು ಒಳಗೊಂಡ ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು.ಶಿವಮೊಗ್ಗ ದಸರಾ ಮಹೋತ್ಸವವು ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಪ್ರಮುಖ ಸಾರ್ವಜನಿಕ ಉತ್ಸವವಾಗಿದ್ದು, ಜಿಲ್ಲೆಯ ಜನತೆ ಹಾಗೂ ಸ್ಥಳೀಯ ಕಲಾವಿದರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಾಗೂ ವ್ಯವಸ್ಥಿತವಾಗಿ ಆಯೋಜಿಸುವ ಅಗತ್ಯವಿದೆ.

ಆದ್ದರಿಂದ, ಮೇಲ್ಕಂಡ ಅಂಶಗಳನ್ನು ಪರಿಗಣಿಸಿ 2026ನೇ ಸಾಲಿನ ಶಿವಮೊಗ್ಗ ದಸರಾ ಮಹೋತ್ಸವದ ಪೂರ್ವಸಿದ್ಧತಾ ಕಾರ್ಯಗಳನ್ನು ತಕ್ಷಣವೇ ಪ್ರಾರಂಭಿಸಿ, ಅಗತ್ಯ ಸಮಿತಿಗಳನ್ನು ರಚಿಸಿ, ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಅಗತ್ಯ ವ್ಯವಸ್ಥೆಗಳನ್ನು ಮುಂಚಿತವಾಗಿ ಕೈಗೊಳ್ಳುವುದರ ಜೊತೆಗೆ ಸರ್ಕಾರದಿಂದ ಹೆಚ್ಚುವರಿ ಅನುದಾನ ಪಡೆಯಲು ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮಾನ್ಯ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ನೀಡಿದರು.

ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಶಿವಕುಮಾರ್ ರವರು, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷಾ ರವರು, ಆಶ್ರಯ ಸಮಿತಿ ಸದಸ್ಯರಾದ ಮುನ್ನ ರವರು ಹಾಗೂ ಯಮುನಾ ರಂಗೇಗೌಡರವರು, ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಹೆಚ್ ಪಾಲಾಕ್ಷಿ ರವರು, ರೇಖಾ ರಂಗನಾಥ್ ರವರು, ಆರ್‌ಸಿ ನಾಯಕ್ ರವರು, ಶಿವಮೊಗ್ಗ ಭದ್ರಾವತಿ ನಗರ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾದ ಶಶಾಂಕ್ ಸಜ್ಜನ್ ರವರು, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಚಿನ್ನಪ್ಪ ರವರು, ರಂಗೇ ಗೌಡ ರವರು, ಜ್ಯೋತಿ ಹರಳಪ್ಪ ರವರು, ಲಕ್ಷ್ಮಣ್ ರವರು, ಅಗ್ನಿ ಶಿವುರವರು, ಶರತ್ ಎಸ್ ಕೆ ರವರು ಉಪಸ್ಥಿತರಿದ್ದರು.

Author